ಮಹಿಳಾ ಮತದಾರರನ್ನು ಪಕ್ಷದೆಡೆಗೆ ಆಕರ್ಷಿಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2020-09-20 14:04 GMT

ಬೆಂಗಳೂರು, ಸೆ. 20: ಕಾಂಗ್ರೆಸ್ ಪಕ್ಷದ ಕಡೆಗೆ ಮಹಿಳಾ ಮತದಾರರನ್ನು ಸೆಳೆಯುವ ಕೆಲಸ ಇಂದಿನ ಅಗತ್ಯವಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರವಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಾಮಾಜಿಕ ಹೋರಾಟಗಾತಿ ಅಕೈ ಪದ್ಮಶಾಲಿ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ಮೂಲಕ ಅವರನ್ನು ನಾಯಕರನ್ನಾಗಿ ರೂಪಿಸಬೇಕಿದೆ ಎಂದರು.

ಪ್ರದೇಶ ಕಾಂಗ್ರೆಸ್‍ನ ಮಹಿಳಾ ಮುಖಂಡರ ಸಭೆಯನ್ನು ಐದಾರು ತಿಂಗಳ ಹಿಂದೆಯೇ ಮಾಡಬೇಕಿತ್ತು. ಕೊರೋನ ಕಾರಣದಿಂದ ಸಭೆ ನಡೆಸಲು ಆಗಿರಲಿಲ್ಲ. ಇಂದು ಕಾಲ ಕೂಡಿ ಬಂದಿದೆ. ಶುಭ ಘಳಿಗೆಯಲ್ಲಿ ಅಕೈ ಪದ್ಮಶಾಲಿ ಪಕ್ಷ ಸೇರಿದ್ದಾರೆ. ಅವರು ರಾಜ್ಯ ಕಾಂಗ್ರೆಸ್‍ನ ಆಸ್ತಿ ಅಷ್ಟೇ ಅಲ್ಲ, ದೇಶದ ಆಸ್ತಿ. ಅವರ ಹೋರಾಟವನ್ನು ಪಕ್ಷ ಬೆಂಬಲಿಸಲಿದೆ ಎಂದರು.

ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಪಕ್ಷ ಸಂಘಟನೆ ಮತ್ತು ಹೋರಾಟಗಳನ್ನು ನಡೆಸಬೇಕು. ಆ ಎಲ್ಲ ಸಾಮರ್ಥ್ಯ ಮಹಿಳೆಯರಿಗೆ ಇದೆ. ನಾಯಕರುಗಳ ಹಿಂದೆ ಗಿರಕಿ ಹೊಡೆಯುವವರು ಇದ್ದಾರೆ. ಅಂತಹವರು ನಾಯಕರಾಗಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ಯಾರು ಕೆಲಸ ಮಾಡುತ್ತಾರೋ ಅವರಷ್ಟೇ ನಾಯಕರಾಗಿ ಬೆಳೆಯೋದು ಎಂದು ಡಿಕೆಶಿ ಹೇಳಿದರು.

ಕಾಂಗ್ರೆಸ್ ಪಕ್ಷ ತೃತೀಯ ಲಿಂಗದವರಿಗೆ ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದೆ. ಅವರ ವಿಚಾರಧಾರೆಯನ್ನು ಒಪ್ಪಿ ನಾವು ಅವರಿಗೆ ಕಾರ್ಯಕ್ರಮ ನೀಡಿದ್ದೆವು. ಮುಂದಿನ ದಿನಗಳಲ್ಲೂ ಆ ನೊಂದ ಜನರಿಗೆ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಲು ಕೆಲಸ ಮಾಡುತ್ತೇವೆ. ನಾವು ಅವರ ಸ್ಥಾನದಲ್ಲಿ ನಿಂತು ಯೋಚಿಸಬೇಕು. ಅವರಿಗೆ ಸಮಾನತೆ ನೀಡುವುದು ನಮ್ಮ ಧರ್ಮ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ವ್ಯಾಪಕ ಚರ್ಚೆ ಮಾಡಿ ಅವರ ಜತೆ ಪಕ್ಷ ನಿಲ್ಲಬೇಕು ಎಂದು ನಿರ್ಧರಿಸಿದ್ದಾರೆ. ಅಕೈ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಆ ಸಮುದಾಯದ ಒಳಿತಿಗಾಗಿ ಪಕ್ಷ ಶ್ರಮಿಸಲಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಪುಷ್ಪ ಅಮರನಾಥ್, ಕಾಂಗ್ರೆಸ್‍ನ ಶಾಸಕಿಯರಾದ ಲಕ್ಷ್ಮಿಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಸೌಮ್ಯರೆಡ್ಡಿ, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News