ನಾಗಮೋಹನ್‍ದಾಸ್ ಕುರಿತು ಸಚಿವ ಸಿ.ಟಿ. ರವಿ ಹೇಳಿಕೆಗೆ ಖಂಡನೆ

Update: 2020-09-20 18:32 GMT

ಬೆಂಗಳೂರು, ಸೆ. 20: ಡಿ.ಜೆ.ಹಳ್ಳಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಬಿಡುಗಡೆ ಮಾಡಿರುವ ವರದಿ ಪೂರ್ವಗ್ರಹ ಪೀಡಿತವಾಗಿದ್ದು, ಅವರು ಜಸ್ಟೀಸ್ ನಾಗಮೋಹನ್‍ದಾಸ್ ಅಲ್ಲ, ಇನ್‍ಜಸ್ಟೀಸ್ ನಾಗಮೋಹನ್ ದಾಸ್ ಎಂದು ಸಚಿವ ಸಿ.ಟಿ.ರವಿ ನೀಡಿರುವ ಹೇಳಿಕೆಯನ್ನು ಸಂವಿಧಾನ ಓದು ಅಭಿಯಾನ ಸಮಿತಿ ತೀವ್ರವಾಗಿ ಖಂಡಿಸಿದೆ.

ರಾಜ್ಯದಲ್ಲಿ ಅನಂತಕುಮಾರ ಹೆಗಡೆ, ಸಿ.ಟಿ.ರವಿ, ತೇಜಸ್ವಿ ಸೂರ್ಯರಂತಹ  ತಮ್ಮ ಸ್ಥಾನಮಾನದ ಅರಿವಿಲ್ಲದ ಜನಪ್ರತಿನಿಧಿಗಳೇ ಹೆಚ್ಚಾಗುತ್ತಿರುವುದು ಕೂಡ ವಿಷಾದನೀಯ. ಎಚ್.ಎನ್. ನಾಗಮೋಹನದಾಸ್‍ರ ಕುರಿತ ಸಚಿವರ ಹೇಳಿಕೆ ಖಂಡನೀಯ. ಅವರೊಂದಿಗಿಗೆ ಇರುವ ತಾತ್ವಿಕ ಭಿನ್ನಾಭಿಪ್ರಾಯವನ್ನು ಎಷ್ಟೇ ಕಟುವಾಗಿ, ಯಾವುದೇ ವೇದಿಕೆಯಲ್ಲಿ ಚರ್ಚಿಸಲಿ. ಅದು ದೇಶದ ಪ್ರತಿಯೊಬ್ಬರ ಹಕ್ಕು. ಅದುಬಿಟ್ಟು ಪ್ರತಿಯೊಂದು ಸಂದರ್ಭದಲ್ಲಿ  ತಮ್ಮ ಕುತಂತ್ರವನ್ನು ಸಕಾರಣವಾಗಿ  ಬಯಲು ಮಾಡುತ್ತಾರೆ ಎನ್ನುವ ಕಾರಣಕ್ಕೆ  ವ್ಯಕ್ತಿ ನಿಂದನೆ ಮಾಡುವುದು,  ಅವಹೇಳನಕಾರಿಯಾಗಿ ಮಾತನಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಮಿತಿ ಹೇಳಿದೆ.

ಸ್ವಾತಂತ್ರ್ಯ ಹೋರಾಟದ ಕುಟುಂಬದಿಂದ ಬಂದ ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ಅವರು ಸ್ವಾತಂತ್ರ್ಯ ಚಳುವಳಿಯ ಆಶಯವನ್ನು ಜನತೆಯ ಬಳಿಗೆ ತೆಗೆದುಕೊಂಡು ಹೋದವರಾಗಿದ್ದಾರೆ. ಸಂವಿಧಾನದ ಆಶಯಕ್ಕೆ ಯಾರೇ ಅವಮಾನ ಮಾಡಿದಾಗ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಾಗ, ಸರಕಾರದ ನೀತಿಗಳು ಸಂವಿಧಾನ ವಿರೋಧಿಯಾದಾಗ ಅವರು ಎಷ್ಟೇ ದೊಡ್ಡವರಾದರೂ  ಎಚ್ಚರಿಸಿದವರಾಗಿದ್ದಾರೆ. ಸಂವಿಧಾನ ಬದ್ಧವಾಗಿ ಅವರು ನೀಡಿದ ಒಂದೊಂದು ತೀರ್ಪು ಕೂಡ ಸಾಮಾಜಿಕ ನ್ಯಾಯದ ಮೈಲಿಗಲ್ಲು.  ಅಂತವರ ಕುರಿತು ಮಾತನಾಡುವಾಗ ಹೆಚ್ಚು ಎಚ್ಚರಿಕೆಯಿಂದ ಮಾತನಾಡಬೇಕು. ಜವಾಬ್ದಾರಿಯಿಂದ ಮಾತನಾಡಬೇಕಿತ್ತು.
ಆದರೆ, ಪತ್ರಿಕಾ  ವರದಿಯಲ್ಲಿ ನೋಡಿದರೆ, ಸತ್ಯಶೋಧನಾ ಸಮಿತಿಯಲ್ಲಿ ಯಾರಿದ್ದರು, ಈ ವರದಿ ತಯಾರಿಸಿದವರು ಯಾರು? ಬಿಡುಗಡೆ ಮಾಡಿದವರು ಯಾರು? ಎನ್ನುವ ಕನಿಷ್ಠ ಮಾಹಿತಿಯನ್ನೂ ಸಚಿವರು ಹೊಂದಿದಂತಿಲ್ಲ.  ಕನಿಷ್ಟ ಮಾಹಿತಿಯನ್ನೂ ಪಡೆದುಕೊಳ್ಳದೇ ಸಚಿವರು ಕೊಟ್ಟ ಇಂತ ಹೇಳಿಕೆಯನ್ನು ಸಂವಿಧಾನ ಓದು ಅಭಿಯಾನ ಸಮಿತಿಯು ಬಲವಾಗಿ ಖಂಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News