ಕೊರೋನದಿಂದ ಜನ ಮೃತಪಡುತ್ತಿದ್ದರೂ ಸರಕಾರ ನಿರ್ಲಕ್ಷ್ಯ: ಈಶ್ವರ ಖಂಡ್ರೆ

Update: 2020-09-20 18:39 GMT

ಬೆಂಗಳೂರು, ಸೆ. 20: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ಈ ವೈರಾಣುವಿಗೆ 7,800ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೂ ಸರಕಾರ ನಿರ್ಲಕ್ಷ್ಯತೆ ತಾಳಿ, ಮುಗ್ಧ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸಿನಿಮಾ ಮಂದಿರ, ಈಜುಕೊಳ ಹಾಗೂ ಶಾಲಾ-ಕಾಲೇಜು ಹೊರತುಪಡಿಸಿ ಉಳಿದೆಲ್ಲವನ್ನೂ ತೆರೆದಿರುವ ಸರಕಾರ ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ಗಮನವನ್ನೇ ಹರಿಸುತ್ತಿಲ್ಲ. ಜನ ಸೂಕ್ತ ಚಿಕಿತ್ಸೆ ಸಿಗದೆ, ಸೋಂಕಿನಿಂದ ಸಾಯುತ್ತಿದ್ದರೂ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ದಿಲ್ಲಿಯನ್ನು ಎಡತಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಶಾಲೆ ಆರಂಭಿಸುವುದು ಸರಿಯಲ್ಲ: ನಿನ್ನೆ ಒಂದೇ ದಿನ ರಾಜ್ಯದಲ್ಲಿ ದಾಖಲೆಯ 179 ರೋಗಿಗಳು ಕೊರೊನಾಗೆ ಬಲಿಯಾಗಿದ್ದಾರೆ. ವಾಟ್ಸಾಪ್, ಪೇಸ್‍ಬುಕ್‍ಗಳ ತುಂಬಾ ಬರೀ ಸಾವಿನ ಸುದ್ದಿಗಳೇ ಬರುತ್ತಿವೆ. ಈ ಹಂತದಲ್ಲಿ ಶಾಲಾ-ಕಾಲೇಜು ತೆರೆಯುವ ಚಿಂತನೆ ನಡೆಸಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಸರಕಾರ ಹುಡುಗಾಟ ಮಾಡುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಎಪ್ರಿಲ್‍ನಿಂದ ಈಚೆಗೆ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ. ಆದರೆ, ಸರಕಾರ ಏನೂ ಆಗಿಯೇ ಇಲ್ಲ ಎಂಬಂತೆ ಜಾಣ ಕುರುಡುತನ, ಕಿವುಡುತನ ಪ್ರದರ್ಶಿಸುತ್ತಿದೆ. ಇಷ್ಟು ಜನ ವಿರೋಧಿ ಸರಕಾರವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ತಿಳಿಸಿದ್ದಾರೆ.

ಸರಕಾರ ಸಂಪೂರ್ಣ ಕೈಚೆಲ್ಲಿ ಕುಳಿತಿದೆ. ಈ ಹಿನ್ನೆಲೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಎರಡು ಅಡಿ ಅಂತರ ಪಾಲಿಸುವ ಮೂಲಕ ಮತ್ತು ತಮ್ಮ ಕೈಗಳನ್ನು ಆಗಾಗ ಸಾಬೂನಿನಿಂದ ತೊಳೆದು ಶುಚಿಗೊಳಿಸಿ ಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News