ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಕೆ: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2020-09-21 11:50 GMT

ಚಿಕ್ಕಮಗಳೂರು, ಸೆ.21: ಜಿಲ್ಲಾದ್ಯಂತ ಇದುವರೆಗೆ 51,022 ಮಂದಿಗೆ ವಿವಿಧ ರೂಪದ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 7,119 ಮಂದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿವೆ. ಸರಕಾರದ ನಿಯಮಾವಳಿಯಂತೆ ಸೋಂಕಿತರಿಗೆ ನೀಡಿದ ಚಿಕಿತ್ಸೆಯಿಂದಾಗಿ 5,595 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1,517 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೂ 107 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸರಾಸರಿ ಪ್ರಮಾಣ ಶೇ.2ರಷ್ಟಿದ್ದು, ಈ ಪ್ರಮಾಣ ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 7,219 ಮಂದಿ ಕೊರೋನ ಸೋಂಕಿತರಲ್ಲಿ 5,595 ಮಂದಿ ಗುಣಮುಖರಾಗಿದ್ದು, ಶೇ.77ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಜಿಲ್ಲೆಯಲ್ಲಿ ಇತ್ತೀಚೆಗೆ ದಿನದಿಂದ ದಿನಕ್ಕೆ ಸೋಂಕು ಪ್ರಕರಣ ಕ್ಷೀಣಿಸುತ್ತಿದ್ದು, ಪ್ರಾರಂಭದಲ್ಲಿ ಶೇ.2ರಷ್ಟಿದ್ದ ಸೋಂಕಿತರ ಸಾವಿನ ಪ್ರಮಾಣ ಕಳೆದ ಎರಡು ತಿಂಗಳಲ್ಲಿ ಶೇ.1.5ಕ್ಕೆ ಇಳಿಕೆಯಾಗಿದೆ. ಹದಿನೈದು ದಿನಗಳಲ್ಲಿ ಶೇ.1ರಷ್ಟು ಸಾವಿನ ಪ್ರಮಾಣ ವರದಿಯಾಗಿದ್ದು, ಕಳೆದ 7ದಿನಗಳಲ್ಲಿ ಶೇ.0.9ರಷ್ಟು ಸೋಂಕಿತರ ಸಾವಿನ ಪ್ರಮಾಣ ದಾಖಲಾಗಿದೆ. ಇದೇ ವೇಳೆ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೋನ ಕೇರ್ ಸೆಂಟರ್‍ಗಳಲ್ಲಿ ಉತ್ತಮ ಚಿಕಿತ್ಸೆಗಳೊಂದಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವೈದ್ಯರು, ಆರೋಗ್ಯ ಸಿಬ್ಬಂದಿಯ ಪ್ರಮಾಣಿಕ ಪರಿಶ್ರಮದಿಂದಾಗಿ ಭಾರೀ ಪ್ರಮಾಣದಲ್ಲಿ ಸೋಂಕಿತರು ಗುಣಮಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ಸೋಂಕಿನಿಂದ 107 ಮಂದಿ ಮೃತಪಟ್ಟಿದ್ದು, ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟ ಕಾರಣಕ್ಕೆ ಅವರ ಸಂಬಂದಿ ಜಿಲ್ಲಾಸ್ಪತ್ರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಒಂದು ಘಟನೆ ವರದಿಯಾಗಿದೆ. ವೈದ್ಯರ ವಿರುದ್ಧ ಆಕ್ರೋಶಗೊಂಡ ಸಂಬಂಧಿಗಳು ಆಸ್ಪತ್ರೆಯ ಕಿಟಕಿ, ಬಾಗಿಲುಗಳನ್ನು ಒಡೆದು ಹಾಕಿದ್ದಾರೆ. ಇಂತಗ ಘಟನೆಗಳ ವಿರುದ್ಧ ಪ್ರಕರಣ ದಾಖಲಿಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ವೈದ್ಯರು ಒತ್ತಡದ ನಡುವೆ ನಿರಂತರವಾಗಿ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಕೊರೋನ ಸೋಂಕಿತ ವ್ಯಕ್ತಿಯಲ್ಲಿ ಬೇರೆ ಯಾವುದೇ ಕಾಯಿಲೆಗಳಿಲ್ಲದಿದ್ದಲ್ಲಿ ಸಾವಿಗೀಡಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಆದರೆ ಉಸಿರಾಟದ ತೊಂದರೆ, ಹೈಬಿಪಿ, ಮಧುಮೇಹದಂತಹ ಕಾಯಿಲೆಗಳಿರುವವರು ಅಥವಾ ಸೋಂಕಿಗೆ ತುತ್ತಾಗಿ ಕೊನೆ ಹಂತದಲ್ಲಿ ಚಿಕಿತ್ಸೆಗೆ ಬಂದಲ್ಲಿ ಗುಣಪಡಿಸುವುದು ಕಷ್ಟ. ಆಸ್ಪತ್ರೆಯಲ್ಲಿ ನಡೆದ ಗಲಾಟೆ ನಡೆಯಲು ಕಾರಣವಾದ ಸೋಂಕಿತ ವ್ಯಕ್ತಿ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೋಂಕಿನಿಂದ ವೈದ್ಯರೂ ಮೃತಪಟ್ಟಿರುವಂತಹ ಘಟನೆಗಳು ನೂರಾರಿರುವುದರಿಂದ ಈ ಬಗ್ಗೆ ಎಲ್ಲರೂ ಸಂಯಮದಿಂದ ವರ್ತಿಸಬೇಕು. ಪರಿಸ್ಥಿತಿ ಕೈಮೀರಿ ಮೃತಪಟ್ಟ ಸಂದರ್ಭದಲ್ಲಿ ಅನಾವಶ್ಯಕವಾಗಿ ವೈದ್ಯರನ್ನು ದೂರುವುದು, ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು. ಸೋಂಕಿತರು ಮೃತಪಟ್ಟಾಗ ಸಂಬಂಧಿಗಾಗುವ ನೋವು ನಮಗೂ ಆಗುತ್ತದೆ. ಆದರೆ ಪರಿಸ್ಥಿತಿ ಕೈಮೀರಿದಾಗ ವೈದ್ಯರಾದರೂ ಏನು ಮಾಡಲು ಸಾಧ್ಯ ಎಂದ ಅವರು, ಇಂತಹ ಘಟನೆಗಳು ಮರುಕಳಿಸಿದಲ್ಲಿ ಎಫ್‍ಐಆರ್ ದಾಖಲು ಮಾಡುವುದು ಅನಿವಾರ್ಯವಾಗಲಿದೆ ಎಂದರು.

ಸರಕಾರ ಮಾರ್ಗಸೂಚಿಯಂತೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಹೊರತುಪಡಿಸಿ ಉಳಿದವರು ಸೋಂಕಿತ ವ್ಯಕ್ತಿಯನ್ನು ಭೇಟಿಯಾಗಲು ಅವಕಾಶವೇ ಇಲ್ಲ. ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು ಎಂದು ಇದೇ ವೇಳೆ ಡಿಸಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಉಪಸ್ಥಿತರಿದ್ದರು.

ನಗರದ ಆಶ್ರಯ ಆಸ್ಪತ್ರೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಹೆಚ್ಚುವರಿ ಶುಲ್ಕ ಪಡೆಯಲಾಗಿದೆ ಎಂದು ಆರೋಪಿಸಿ ಜಿಲ್ಲಾಡಳಿತಕ್ಕೆ ಮತ್ತು ರಾಜ್ಯ ಸರಕಾರಕ್ಕೆ ಕೊರೋನ ಸೋಂಕಿಗೊಳಗಾಗಿ ಮೃತರಾದ ವ್ಯಕ್ತಿಯ ಸಂಬಂಧಿಯೊಬ್ಬರು ಲಿಖಿತ ದೂರು ನೀಡಿದ್ದಾರೆ. ಈ ಆರೋಪ ಸಂಬಂಧ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಬುಧವಾರ ಇದರ ತನಿಖೆ ನಡೆಯಲಿದ್ದು, ವರದಿಯನ್ವಯ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಲಾಗುವುದು.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News