ಕಾಫಿನಾಡಿನಲ್ಲಿ ಕ್ಷೀಣಿಸಿದ ಮಳೆ: ಸಹಜ ಸ್ಥಿತಿಯತ್ತ ಜನಜೀವನ

Update: 2020-09-21 18:31 GMT

ಚಿಕ್ಕಮಗಳೂರು, ಸೆ.21: ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆ ಸೋಮವಾರ ಬೆಳಗ್ಗೆಯಿಂದ ಇಳಿಮುಖವಾಗಿದ್ದು, ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೂ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೋಮವಾರ ಹಾಗೂ ಮಂಗಳವಾರವೂ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಕಳೆದ ಶನಿವಾರ ಮಧ್ಯಾಹ್ನದಿಂದ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಶನಿವಾರ ರಾತ್ರಿ ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಸೇರಿದಂತೆ ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಅಬ್ಬರಿಸಿದ್ದ ಮಳೆ ರವಿವಾರ ಇಡೀ ದಿನ ಎಡಬಿಡದೇ ಸುರಿದಿತ್ತು. ಪರಿಣಾಮ ಜಿಲ್ಲೆಯ ಜೀವನದಿಗಳಾದ ಹೇಮಾವತಿ, ಭದ್ರಾ, ತುಂಗಾ ನದಿ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದವು. ಪ್ರಮುಖ ನದಿಗಲಾದ ಹೇಮಾವತಿ, ಭದ್ರೆ, ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ಬಾಳೆಹೊನ್ನೂರು, ಮಾಗುಂಡಿ, ಬಣಕಲ್, ಮೂಡಿಗೆರೆ, ಕಳಸ, ಶೃಂಗೇರಿ ಭಾಗದಲ್ಲಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ನಿರ್ಮಾಣವಾಗಿತ್ತು. ನದಿ ಪಾತ್ರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿತ್ತು.

ಆದರೆ ಎರಡು ದಿನಗಳ ಕಾಲ ಅಬ್ಬರಿಸಿದ ಮಳೆ ಸೋಮವಾರ ಬೆಳಗ್ಗೆಯಿಂದ ಇಡೀ ಜಿಲ್ಲೆಯಲ್ಲಿ ಇಳಿಮುಖವಾಗಿದ್ದು, ಪ್ರವಾಹದ ಭೀತಿಯಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3ರವರೆಗೆ ಬಿಡುವು ನೀಡಿದ್ದ ಮಳೆ ಸಂಜೆ ವೇಳೆ ಸಾಧಾರಣವಾಗಿ ಸುರಿಯಿತಾದರೂ ಎಲ್ಲೂ ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲೂಕುಗಳ ವ್ಯಾಪ್ತಿಯಲ್ಲಿಯೂ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕಳೆದ ಎರಡು ದಿನ ಭಾರೀ ಮಳೆಯಾದ ಪರಿಣಾಮ ಅಲ್ಲಲ್ಲಿ ರಸ್ತೆ ಬದಿ ಧರೆ ಕುಸಿತದಂತಹ ಘಟನೆಗಳು ವರದಿಯಾಗಿದ್ದವು, ರಸ್ತೆ ಬದಿಯಲ್ಲಿ ಕೃತಕ ಜಲಪಾತಗಳು ನಿರ್ಮಾಣವಾಗಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದ ದೃಶ್ಯಗಳು ಸೋಮವಾರವೂ ಮುಂದುವರಿಯಿತು. ಎರಡು ದಿನಗಳ ಮಳೆಗೆ ಚಾರ್ಮಾಡಿ ಘಾಟ್‍ನಲ್ಲಿ ಸಡಿಲಗೊಂಡಿದ್ದ ಮಣ್ಣು ಅಲ್ಲಲ್ಲಿ ಕುಸಿದಿದ್ದು, ಮಣ್ಣು ತೆರವು ಕಾರ್ಯಾಚರಣೆ ಸೋಮವಾರವೂ ನಡೆದಿದೆ. ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಮಳೆ ಕ್ಷೀಣಗೊಂಡಿರುವುದರಿಂದ ಕೃತಕ ಝರಿ, ಜಲಪಾತ, ಪ್ರಾಕೃತಿಕ ಸೌಂದರ್ಯ ಸವಿಯಲು ಪ್ರವಾಸಿಗರು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಮಾಡಿ ಘಾಟ್‍ನ ಅಲ್ಲಲ್ಲಿ ನೆರೆದಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

 ತಾಲೂಕಿನ ಕಳಸ ಪಟ್ಟಣ ಸಮೀಪದ ಹೆಬ್ಬಾಳೆ ಸೇತುವೆ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಮುಳುಗಡೆಯಾಗಿ ಸೇತುವೆ ಮೇಲೆಯೇ ಭದ್ರಾ ನದಿ ನೀರು ಹರಿದಿದ್ದು, ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು. ಸೋಮವಾರ ಬೆಳಗ್ಗೆ ಈ ಭಾಗದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಸೇತುವೆ ಮೇಲಿನ ನೀರು ತೆರವುಗೊಂಡಿದ್ದರಿಂದ ವಾಹನ ಸಂಚಾರ ಮುನಾರಂಭಗೊಂಡಿದೆ. 

ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಸೋಮವಾರ ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದನ್ನು ಹೊರತು ಪಡಿಸಿ ಉಳಿದೆಡೆ ಸಂಜೆ ವೇಳೆ ಸಾಧಾರಾನ ಮಳೆಯಾದ ಬಗ್ಗೆ ವರದಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದರೂ ಒಂದೆರೆಡು ಕಡೆಗಳಲ್ಲಿ ಮನೆ ಗೋಡೆ ಕುಸಿತದಂತಹ ಘಟನೆಗಳನ್ನು ಹೊರತು ಪಡಿಸಿ ಭಾರೀ ಪ್ರಮಾಣದಲ್ಲಿ ಅನಾಹುತ, ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಸೋಮವಾರ ಜಿಲ್ಲಾದ್ಯಂತ ಮಳೆ ಕಡಿಮೆಯಾಗಿರುವುದರಿಂದ ಜನಜೀವನ ಸಹಜ ಸ್ಥಿತಿಯತ್ತ ವಾಲುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News