ಸಂಸ್ಕೃತ ವಿವಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಕ್ರಮ: ಸಚಿವ ಸುರೇಶ್ ಕುಮಾರ್

Update: 2020-09-21 18:47 GMT

ಬೆಂಗಳೂರು, ಸೆ.21: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ `ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ'ದ ಕಟ್ಟಡಗಳ ನಿರ್ಮಾಣಕ್ಕೆ ಶೀಘ್ರದಲ್ಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರದಿಂದ ಆರಂಭವಾದ ವಿಧಾನಪರಿಷತ್‍ನ ಅಧಿವೇಶನದಲ್ಲಿ ನಿಯಮ 58ರ ಅಡಿಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅ. ದೇವೇಗೌಡ ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 2010ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. 2013ರಲ್ಲಿ ಈ ವಿಶ್ವವಿದ್ಯಾಲಯದ ಕಟ್ಟಡಗಳ ನಿರ್ಮಾಣಕ್ಕೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ 100 ಎಕರೆ ಜಾಗ ಮಂಜೂರು ಮಾಡಿದ್ದು, 2015ರಲ್ಲಿ ಸದರಿ ಜಮೀನಿನ ನಕ್ಷೆ ಅನುಮೋದಿಸಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದರು.

ವಿಶ್ವವಿದ್ಯಾಲಯವು ಸುಮಾರು 369 ಕೋಟಿ ವೆಚ್ಚದಲ್ಲಿ ಆಡಳಿತ ಭವನ, ಶೈಕ್ಷಣಿಕ ಭವನಗಳು ಹಾಗೂ ವಿದ್ಯಾರ್ಥಿ ನಿಲಯಗಳು ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ನೀಲನಕ್ಷೆ ಸೇರಿದಂತೆ ಇತರೆ ವಿವರಗಳ ಪ್ರಸ್ತಾವನೆಯನ್ನು 2019ರಲ್ಲಿ ಸರಕಾರದ ಆಡಳಿತ ಅನುಮೋದನೆಗೆ ಸಲ್ಲಿಸಿದೆ. 

ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಅನುದಾನ ಬಿಡುಗಡೆಗೆ ನಿರ್ಬಧ ವಿಧಿಸಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ವಿಳಂಬವಾಗಿದೆ. ಪ್ರಸ್ತುತ ಸದರಿ ವಿಶ್ವವಿದ್ಯಾಲಯವು ಜಯಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆರ್ಥಿಕ ಇಲಾಖೆ ನಿರ್ಬಂಧ ಸಡಿಲಗೊಳಿಸಲಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News