ಅನುದಾನ ಹಂಚಿಕೆ ಸಂಬಂಧ ಸಮಗ್ರ ಮಾಹಿತಿಯಿಲ್ಲ: ಸಚಿವ ಶ್ರೀರಾಮುಲು

Update: 2020-09-21 18:52 GMT

ಬೆಂಗಳೂರು, ಸೆ.21: ಕೊರೋನ ಆರಂಭವಾದಾಗಿನಿಂದ ಸರಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಮೂಲಭೂತ ಸೌಕರ್ಯಕ್ಕೆ ಮಂಜೂರು ಮಾಡಿದ ಅನುದಾನ, ಬಿಡುಗಡೆಯಾದ ಅನುದಾನ, ವೆಚ್ಚ ಮಾಡಿದ ಅನುದಾನ ಹಾಗೂ ಬಿಡುಗಡೆಗೆ ಬಾಕಿಯುಳ್ಳ ಅನುದಾನದ ಕುರಿತು ಸಮಗ್ರ ಮಾಹಿತಿಯಿಲ್ಲ. ಸದನ ಮುಗಿಯುವುದರೊಳಗೆ ಸದನಕ್ಕೆ ಮಾಹಿತಿ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸೋಮವಾರದಿಂದ ಆರಂಭವಾದ ವಿಧಾನಪರಿಷತ್‍ನ ಅಧಿವೇಶನದಲ್ಲಿ ನಿಯಮ 58ರ ಅಡಿಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಮೋಹನ್ ಕುಮಾರ್ ಕೊಂಡಜ್ಜಿ ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು,ಅನುದಾನ ಹಂಚಿಕೆಯಾಗಿದ್ದು, ಅದರ ಖರ್ಚು-ವೆಚ್ಚದ ಸಂಬಂಧ ಕೆಲವೊಂದು ಜಿಲ್ಲೆಗಳಿಂದ ಮಾಹಿತಿ ಪಡೆಯಬೇಕು. ಹೀಗಾಗಿ, ಸದನ ಮುಗಿಯುವದರೊಳಗೆ ಮಾಹಿತಿ ಒದಗಿಸಲಾಗುತ್ತದೆ ಎಂದು ಹೇಳಿದರು.

ಈ ನಡುವೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬೇರೆಬೇರೆ ರಾಜ್ಯ ಹಾಗೂ ದೇಶಗಳಲ್ಲಿ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಆ ಕ್ಷಣವೇ ಅಪ್‍ಡೇಟ್ ಆಗುವ ಮೂಲಕ ಸಮಗ್ರವಾದ ವರದಿಯನ್ನು ನೀಡುತ್ತಿದ್ದಾರೆ. ತಂತ್ರಜ್ಞಾನದ ಕಾಲದಲ್ಲಿಯೂ ಸಮಯಾವಕಾಶ ಬೇಕೆಂದು ಕೇಳುತ್ತಿರುವುದು ಹಾಸ್ಯಾಸ್ಪದ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಹಾಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, 10 ದಿನಗಳು ಸಮಯಾವಕಾಶದಲ್ಲಿ ಸಮಗ್ರ ಉತ್ತರ ಸಚಿವರು ನೀಡುತ್ತಾರೆ ಎನ್ನುತ್ತಿದ್ದಂತೆಯೇ, ಎಸ್.ಆರ್.ಪಾಟೀಲ್ ಹಾಗೂ ವಿಪಕ್ಷ ಸದಸ್ಯರು ಸದನವನ್ನು ಮೊಟಕುಗೊಳಿಸಲು ಸರಕಾರ ಮುಂದಾಗಿದೆ. ಇದರ ನಡುವೆ ಇವರು 10 ದಿನ ಸಮಯ ಕೇಳುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು.

ವಿಪಕ್ಷ ಸದಸ್ಯರಾದ ಸಿ.ಎಂ.ಇಬ್ರಾಹಿಂ, ಧರ್ಮೇಶ್, ರವಿ ಹಾಗೂ ಇತರರು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದರು. ಸಚಿವರು ಪತ್ರಿಕಾಗೋಷ್ಠಿ ನಡೆಸಿ ಸರಕಾರದ ಬಳಿ ಎಲ್ಲ ಮಾಹಿತಿಯೂ ಇದೆ ಎನ್ನುತ್ತಾರೆ. ಆದರೆ, ಸದನದಲ್ಲಿ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಎ.ನಾರಾಯಣಸ್ವಾಮಿ ದೂರಿದರು.

ಸರಕಾರಿ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಕ್ಕೆ ಮೀಸಲಿಟ್ಟಿದ್ದ ಅನುದಾನ, ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೋನ ಚಿಕಿತ್ಸೆ ಸಂಬಂಧ ಬಿಡುಡಗೆ ಮಾಡಿರುವ ಹಾಗೂ ಬಾಕಿಯಿರುವ ಹಣದ ಮಾಹಿತಿ, ಕೋವಿಡ್ ಕೇರ್ ಕೇಂದ್ರಗಳ ನಿರ್ವಹಣೆ ಸಂಭಂಧ ಮಂಜೂರಾದ ಹಣ, ಬಿಡುಗಡೆಯಾದ ಅನುದಾನ, ಬಾಕಿಯಿರುವ ಅನುದಾನ ಕುರಿತು ಮಾಹಿತಿ ನೀಡುವಂತೆ ಒತ್ತಾಯಿಸಿದರು. ಈ ನಡುವೆ ಸಭಾಪತಿ ಪ್ರತಾಪಚಂದ್ರಶೆಟ್ಟಿ ಸದನ ಅಂತ್ಯಗೊಳ್ಳುವುದರೊಳಗೆ ಮಾಹಿತಿ ನೀಡುವಂತೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News