ತಜ್ಞರ ಸಮಿತಿ ಸಲಹೆಯಂತೆ ಆರೋಗ್ಯ ಕಿಟ್‍ಗಳ ಖರೀದಿ: ಸಚಿವ ಶ್ರೀರಾಮುಲು

Update: 2020-09-21 18:55 GMT

ಬೆಂಗಳೂರು, ಸೆ.21: ತಜ್ಞರು ನೀಡುವ ಸಲಹೆಗಳನ್ನಾಧರಿಸಿ ಪಿಪಿಇ ಕಿಟ್‍ಗಳು, ವೆಂಟಿಲೇಟರ್, ಮಾಸ್ಕ್ ಗಳನ್ನು ರಾಜ್ಯ ಸರಕಾರ ಖರೀದಿ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸೋಮವಾರದಿಂದ ಆರಂಭವಾದ ವಿಧಾನಪರಿಷತ್‍ನ ಅಧಿವೇಶನದಲ್ಲಿನಿಯಮ 58ರ ಅಡಿಯಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದಂತೆಯೇ ಕಿಟ್‍ಗಳಿಗೂ ಬೇಡಿಕೆ ಅಧಿಕಗೊಂಡಿತು. ಈ ಹಿನ್ನೆಲೆಯಲ್ಲಿ ಸರಕಾರ ಅಗತ್ಯದಷ್ಟು ಕಿಟ್‍ಗಳನ್ನು ಖರೀದಿಸಲಾಗಿದೆ ಎಂದರು. 

ರಾಜ್ಯದಲ್ಲಿ ಮೊದಲ ಕೊರೋನ ಪ್ರಕರಣ ಕಾಣಿಸಿಕೊಂಡಾಗಿನಿಂದಲೂ ಸರಕಾರ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ತಜ್ಞ ವೈದ್ಯರು ಹಾಗೂ ತಂತ್ರಜ್ಞರ ತಂಡಗಳಿಂದ ನಿರಂತರವಾದ ಸಲಹೆ ಹಾಗೂ ಸೂಚನೆಗಳನ್ನು ಪಡೆದುಕೊಳ್ಳಲಾಗಿದೆ. ಅಲ್ಲದೆ, ಕೇಂದ್ರ ಸರಕಾರವೂ ಗುಣಮಟ್ಟದ ಕಿಟ್‍ಗಳನ್ನು ಒದಗಿಸುವ ಕಂಪೆನಿಗಳ ಪಟ್ಟಿಯನ್ನೂ ನೀಡಲಾಗಿತ್ತು. ಅದರ ಆಧಾರದ ಮೇಲೆ ಸರಕಾರ ಅಲ್ಲಿಂದ ಕಿಟ್‍ಗಳನ್ನು ಖರೀದಿಸಲಾಗಿದೆ ಎಂದ ಅವರು, ಚೀನಾ ಮೂಲದ ಕಂಪೆನಿಗಳಿಂದಲೂ ಕಿಟ್‍ಗಳನ್ನು ಖರೀದಿಸಲಾಗಿದೆ ಎಂದು ಸದನಕ್ಕೆ ಅವರು ಮಾಹಿತಿ ನೀಡಿದರು.

ಈ ಮಧ್ಯೆ ಪ್ರತಿಕ್ರಿಯಿಸಿದ ಎಂ.ನಾರಾಯಣಸ್ವಾಮಿ, ಆರೋಗ್ಯ ಸಚಿವರು ಸರಕಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ವೆಂಟಿಲೇಟರ್‍ಗಳನ್ನು ಪೂರೈಸಿದ್ದ ದಿಲ್ಲಿ ಮೂಲದ ಕಂಪೆನಿ ವಿರುದ್ಧ ಮಾಜಿ ಶಾಸಕರೊಬ್ಬರು ಕಳಪೆ ಗುಣಮಟ್ಟದ್ದು ಪೂರೈಕೆ ಮಾಡಿದ್ದಾರೆ ಎಂದು ದೂರು ನೀಡಿದ್ದರು ಎಂದು ಹೇಳಿದರು.

ಒಂದು ವೆಂಟಿಲೇಟರ್‍ಗೆ ಕೇಂದ್ರ ಸರಕಾರವು 4 ಲಕ್ಷ ರೂ.ಗಳು ನೀಡಿ ಖರೀದಿಸಿದೆ. ಆದರೆ, ರಾಜ್ಯ ಸರಕಾರವು 5 ಲಕ್ಷದಿಂದ 18 ಲಕ್ಷದವರೆಗೆ ಹಣವನ್ನು ಖರ್ಚು ಮಾಡಿ ಖರೀದಿ ಮಾಡಿದೆ. ಮತ್ತೊಂದು ಕಡೆ ಚೀನಾದಿಂದ ಯಾವ ವಸ್ತುಗಳನ್ನು ಪಡೆಯಬಾರದೆಂದು ಕೇಂದ್ರ ಸರಕಾರ ಹೇಳುತ್ತಾ, ಮತ್ತದೇ ದೇಶದಿಂದ 5 ಲಕ್ಷದಷ್ಟು ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದರು. ಅದನ್ನು ಯಾರಿಗೆ ನೀಡಿದರು ಎಂಬುದು ತಿಳಿದಿಲ್ಲವಾದರೂ, ಕೊನೆಗೆ ಅವು ಕಳಪೆ ಗುಣಮಟ್ಟದ್ದ ಎಂದು ಒಂದೂವರೆ ಲಕ್ಷದಷ್ಟು ಕಿಟ್‍ಗಳನ್ನು ವಾಪಸ್ಸು ನೀಡಿದರು ಎಂದು ನಾರಾಯಣಸ್ವಾಮಿ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News