ಫಿನ್‍ಸೆನ್ ಫೈಲ್ಸ್ : ಶಂಕಾಸ್ಪದ ಚಟುವಟಿಕೆಗಳ ವರದಿಯಲ್ಲಿ ಅದಾನಿ ಗ್ಲೋಬಲ್‍ಗೆ ವರ್ಗಾವಣೆಯಾದ ಮೊತ್ತವೂ ಉಲ್ಲೇಖ

Update: 2020-09-22 07:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಅಮೆರಿಕಾದ ವಿತ್ತೀಯ ಕಾವಲು ಸಂಸ್ಥೆ ಫಿನ್‍ಸೆನ್‍ಗೆ ಸಲ್ಲಿಸಲಾದ ಶಂಕಾಸ್ಪದ ಚಟುವಟಿಕೆಗಳ ವರದಿಗಳಲ್ಲಿ ಅದಾನಿ ಸಮೂಹದ ಸಿಂಗಾಪುರ ಮೂಲದ ಜಾಗತಿಕ ಅಂಗಸಂಸ್ಥೆ ಅದಾನಿ ಗ್ಲೋಬಲ್ ಪಿಟಿಇ ಹೆಸರು ಕೂಡ ಉಲ್ಲೇಖಗೊಂಡಿದೆ ಎಂದು indianexpress.com ವರದಿ ಮಾಡಿದೆ.

ಸೆಶೆಲ್ಲೆಸ್‍ನ ಮಾಹೆ ಹಾಗೂ ವಿಕ್ಟೋರಿಯಾದ ವಿಳಾಸಗಳನ್ನು ಹೊಂದಿರುವ  ಹಾಗೂ `ಶೆಲ್ ಕಂಪೆನಿ' ಎಂಬ ಶಂಕೆಯಿರುವ ಥಿಯೋನ್ವಿಲ್ಲೆ ಫೈನಾನ್ಶಿಯರ್ ಲಿ. ಜತೆಗೆ ಅದಾನಿ ಗ್ಲೋಬಲ್ ನಡೆಸಿದ  ವಹಿವಾಟುಗಳ ಕುರಿತಾದ ವಿವರಗಳೂ ಶಂಕಾಸ್ಪದ ಚಟುವಟಿಕೆಗಳ ವರದಿಗಳಲ್ಲಿ ಸೇರಿದೆ.

ಸೆಶೇಲ್ಲೆಸ್ ಮೂಲದ ಸಂಸ್ಥೆಯಿಂದ ಅದಾನಿ ಸಂಸ್ಥೆಯು ಹಲವಾರು ವಯರ್ ಟ್ರಾನ್ಸ್ ಫರ್ ಮೂಲಕ 14.46 ಮಿಲಿಯನ್ ಡಾಲರ್  ಪಡೆದಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ.

ಅಚ್ಚರಿಯೆಂದರೆ 2013ರಲ್ಲಿ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲನ್ ಇದರ ಶಂಕಾಸ್ಪದ ಚಟುವಟಿಕೆಗಳ ವರದಿಯಲ್ಲಿ ಥಿಯೋನ್ವಿಲ್ಲೆ ಸಂಸ್ಥೆಯ ವೆಬ್ ಸೈಟ್ 'ನಿರ್ಮಾಣ ಹಂತದಲ್ಲಿದೆ' ಎಂದು ಬರೆಯಲಾಗಿದ್ದರೆ ಏಳು ವರ್ಷಗಳ ನಂತರವೂ ಆ ವೆಬ್‍ಸೈಟ್ ಸ್ಥಿತಿ ಹಾಗೆಯೇ ಇದೆ.

ಲಭ್ಯ ದಾಖಲೆಗಳ ಪ್ರಕಾರ ಜುಲೈ 2013ರಲ್ಲಿ ಅದಾನಿ ಗ್ಲೋಬಲ್‍ನ ಐಸಿಐಸಿಐ ಬ್ಯಾಂಕ್, ಸಿಂಗಾಪುರ ಖಾತೆಗೆ  5.6 ಮಿಲಿಯನ್ ಡಾಲರ್ ಮೊತ್ತ ನಾಲ್ಕು ವಯರ್ ಟ್ರಾನ್ಸ್ ಫರ್ ಮೂಲಕ ಬಂದಿತ್ತು. ಇದಕ್ಕೂ ಮೊದಲು ಜೂನ್ ತಿಂಗಳಲ್ಲಿಯೂ 2.8 ಮಿಲಿಯನ್ ಡಾಲರ್  ಹಣ ಎರಡು ವಯರ್ ಟ್ರಾನ್ಸ್ ಫರ್ ಮೂಲಕ ಸಂಸ್ಥೆ ಅದಾನಿ ಗ್ಲೋಬಲ್‍ಗೆ ಸಂದಾಯ ಮಾಡಿತ್ತು ಎಂದು ವರದಿ ತಿಳಿಸಿದೆ.

ಜನವರಿಯ 2015ರಲ್ಲಿ ಕೂಡ ಥಿಯೋನ್ವಿಲ್ಲೆ ತನ್ನ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಖಾತೆಯ ಮೂಲಕ ಅದಾನಿ ಗ್ಲೋಬಲ್‍ಗೆ 6.06 ಮಿಲಿಯನ್ ಡಾಲರ್ ಹಣವನ್ನು ಮೂರು ವಯರ್ ಟ್ರಾನ್ಸ್‍ಫರ್ ಮೂಲಕ  ಕಳುಹಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಅದಾನಿ ಸಮೂಹದ ವಕ್ತಾರರು "ಥಿಯೋನ್ವಿಲ್ಲೆ ಫೈನಾನ್ಶಿಯರ್ ಲಿ ಜತೆ ನಮ್ಮ ವಾಣಿಜ್ಯ ವಹಿವಾಟು ಹಾಗೂ ವ್ಯವಹಾರಗಳು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಹಾಗೂ  ಆಯಾಯ ಪ್ರಾಧಿಕಾರಗಳಿಗೆ ಈ ಕುರಿತ ಸಂಪೂರ್ಣ ಮಾಹಿತಿ ನೀಡಲಾಗಿದೆ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News