ಈ ಬಾರಿಯೂ ಮಹಿಷ ದಸರಾ ಆಚರಣೆ: ದಲಿತ ವೆಲ್ಫೇರ್ ಟ್ರಸ್ಟ್

Update: 2020-09-22 08:46 GMT
ಸಾಂದರ್ಭಿಕ ಚಿತ್ರ

ಮೈಸೂರು, ಸೆ.22: ಈ ಬಾರಿ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ, ತಾಕತ್ತಿದ್ದರೆ ತಡೆಯಲಿ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರರಿಗೆ ಪ್ರಗತಿಪರರು ಸವಾಲು ಹಾಕಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ  ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಮಹೇಶ್ ಚಂದ್ರಗುರು, ಶಾಂತರಾಜು, ಪುರುಷೋತ್ತಮ್ ಮತ್ತು ಮಹದೇವಮೂರ್ತಿ ಮಾತನಾಡಿದರು.

ಮೊದಲಿಗೆ ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ನಾವು ಯಾರ ಬಾವನೆಗಳಿಗೂ ಧಕ್ಕೆ ಬರದ ರೀತಿಯಲ್ಲಿ ಕಳೆದ ಆರು ವರ್ಷಗಳಿಂದಲೂ ಮಹಿಷ ದಸರಾ ಆಚರಣೆ ಮಾಡಿಕೊಂಡು ಬರುತಿದ್ದೇವೆ. ಆದರೆ ಕಳೆದ ವರ್ಷ ಸಂಸದ ಪ್ರತಾಪ್ ಸಿಂಹ ನಮ್ಮ ಆಚರಣೆಗೆ ಅಡ್ಡಿಪಡಿಸಿ ಈ ನೆಲದ ಮೂಲನಿವಾಸಿಗಳ ಭಾವನೆಗೆ ಧಕ್ಕೆ ತಂದರು. ಇತಿಹಾಸ ಗೊತ್ತಿಲ್ಲದ ಶಾಸಕ ಎಲ್.ನಾಗೇಂದ್ರ ಎಷ್ಟು ವರ್ಷದಿಂದ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ಇವರಿಗೆ ಇತಿಹಾಸ ತಿಳಿಸುವ ಕೆಲಸವನ್ನು ಮಾಡಬೇಕಿದೆ. ಹಾಗಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ದೇಶದಲ್ಲಿ ಈ ಮೊದಲು ಇಬ್ಬರೊ ಮೂವರೊ ಮಹಾನ್ ನಾಯಕರ ಹುಟ್ಟುಹಬ್ಬ ಆಚರಣೆ ಮಾಡಲಾಗುತಿತ್ತು .ಇದೀಗ ಎಲ್ಲ ದಾರ್ಶನಿಕರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಅದನ್ನು ನಾವುಗಳು ವಿರೋಧ ಮಾಡಿದ್ದೇವೆಯೇ? ಅದೇ ರೀತಿ ಈ ದೇಶದ ಮೂಲನಿವಾಸಿಗಳ ರಾಜ ಮಹಿಷ. ಅವರ ಇತಿಹಾಸವನ್ನು ತಿಳಿದುಕೊಂಡು ಹಬ್ಬ ಆಚರಣೆ ಮಾಡುತ್ತಿದ್ದೇವೆ. ಇಷ್ಟ ಇದ್ದವರು ಭಾಗವಹಿಸಬಹುದು, ಕಷ್ಟ ಆದವರು ಬಾಯಿ ಮುಚ್ಚಿಕೊಂಡು ಇರಬೇಕು. ನಮ್ಮ ಆಚರಣೆ ಸಂಸ್ಕೃತಿಗೆ ಧಕ್ಕೆ ತಂದರೆ ನಾವುಗಳು ಸಹ ಸುಮ್ಮನೇ ಕೂರಲು ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News