ಶಿವಮೊಗ್ಗ ಅಬಕಾರಿ ಅಧಿಕಾರಿಗಳ ಭರ್ಜರಿ ಭೇಟೆ: 5.50 ಲಕ್ಷ ರೂ. ಮೌಲ್ಯದ ಗಾಂಜಾ ಗಿಡಗಳು ವಶಕ್ಕೆ

Update: 2020-09-22 12:08 GMT

ಶಿವಮೊಗ್ಗ, ಸೆ.22: ಸೊರಬದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ಬಗರ್‌ಹುಕುಂ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸೊರಬ ತಾಲೂಕಿನ ಕಣ್ಣೂರು ಗ್ರಾಮದ ಗಂಗಾಧರಪ್ಪ, ಪರಶುರಾಮಪ್ಪ, ಹಚ್ಚುರಾಯಪ್ಪ ಎಂಬುವವರು ತಮ್ಮ ಬಗರ್‌ಹುಕುಂ ಜಮೀನಿನಲ್ಲಿ ಗಾಂಜಾ ಬೆಳೆದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸುಮಾರು 30 ಕ್ಕೂ ಹೆಚ್ಚು ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶುಂಠಿ ಬೆಳೆಯ ನಡುವೆ ಗಾಂಜಾ ಗಿಡವನ್ನು ಬೆಳೆಯಲಾಗಿತ್ತು. ಗಾಂಜಾ ಗಿಡಗಳು ಸುಮಾರು ಏಳೆಂಟು ಅಡಿ ಎತ್ತರಕ್ಕೆ ಬೆಳೆದಿದ್ದವು. ಹೂವು ಬಿಟ್ಟಿದ್ದವು. ಬುಡ ಸಹಿತ 200ಕ್ಕೂ ಹೆಚ್ಚು ಗಾಂಜಾ ಗಿಡವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 5.50 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ ಎಂದು ಅಬಕಾರಿ ಡಿಸಿ ಕ್ಯಾಪ್ಟನ್ ಅಜಿತ್ ಕುಮಾರ್ ತಿಳಿಸಿದ್ದಾರೆ.

ಅಜಿತ್ ‌ಕುಮಾರ್ ನೇತೃತ್ವದಲ್ಲಿ, ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಹನುಮಂತಪ್ಪ, ಅಬಕಾರಿ ಉಪನಿರೀಕ್ಷಕ ಜಾನ್.ಪಿ.ಜೆ, ಸೊರಬ ವಲಯದ ಅಬಕಾರಿ ನಿರೀಕ್ಷಕ  ಅಣ್ಣಪ್ಪ, ಸಿಬ್ಬಂದಿಗಳಾದ ಚಂದ್ರಪ್ಪ, ರಾಜಮ್ಮ,ರವೀಂದ್ರ ಪಾಟೀಲ್, ಗುರುಮೂರ್ತಿ, ಮುದಾಸಿರ್ ಸೇರಿದಂತೆ, ಸೊರಬ ಹಾಗೂ ಸಾಗರ ಮತ್ತು ಶಿವಮೊಗ್ಗ ವಲಯಗಳ ಒಟ್ಟು 30 ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News