ತೀವ್ರ ವಿರೋಧದ ನಡುವೆಯೇ ವಿವಾದಿತ 'ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ' ಮಂಡನೆ

Update: 2020-09-22 14:12 GMT

ಬೆಂಗಳೂರು, ಸೆ. 22: ರಾಜ್ಯದ ರೈತರು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧ ಹಾಗೂ ದೊಡ್ಡಮಟ್ಟದ ಪ್ರತಿಭಟನೆಗೆ ಕಾರಣವಾಗಿರುವ ವಿವಾದಿತ 'ಕರ್ನಾಟಕ ಭೂ ಸುಧಾರಣೆಗಳ (ಎರಡನೆ ತಿದ್ದುಪಡಿ), ಲೋಕಾಯುಕ್ತ (ಎರಡನೆ ತಿದ್ದುಪಡಿ) ವಿಧೇಯಕ ಸೇರಿ 12 ವಿಧೇಯಕಗಳು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ.

ಮಂಗಳವಾರ ವಿಧಾನಸಭೆಯ ಶಾಸನ ರಚನಾ ಕಲಾಪದಲ್ಲಿ ಕಂದಾಯ ಸಚಿವ ಆರ್.ಅಶೋಕ್ ವಿಧೇಯಕವನ್ನು ಮಂಡಿಸಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶಿದಿಂದ 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ತೀರ್ಮಾನ ಮಾಡಲಾಗಿದ್ದು, ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಬಹುದು ಎಂದು ಘೋಷಿಸಲಾಗಿದೆ.

ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ-2020, 1961ರ ಅಧಿನಿಯಮ 79ಎ, 79ಬಿ, 79 ಸಿ ಪ್ರಕರಣಗಳನ್ನು ಬಿಟ್ಟು ಬಿಡುವ ಪ್ರಸ್ತಾಪ ಮಾಡಲಾಗಿದೆ. `ಎ' ವರ್ಗದ ನೀರಾವರಿ ಭೂಮಿಯು ಕೃಷಿ ಉದ್ದೇಶಕ್ಕೆ ಮಾತ್ರ ಮಾರಾಟ ಮಾಡುವ ಪ್ರಸ್ತಾಪ ಮಾಡಲಾಗಿದೆ. ಕೃಷಿ ಭೂಮಿಯ ಖರೀದಿಗಾಗಿ ಇರುವ ನಿರ್ಬಂಧವು ಉದ್ದೇಶಿತ ಮಸೂದೆ ಜಾರಿಯಿಂದ ತೆರವುಗೊಳ್ಳಲಿದೆ.

ಅಲ್ಲದೆ, ಕೃಷಿ ಉದ್ದೇಶಕ್ಕಾಗಿ ಮಾತ್ರ ಬಳಸುವುದರ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಾಗುತ್ತಿದೆ. ಭೂಮಿಯ ಗರಿಷ್ಠ ಮಿತಿಯ ಒಟ್ಟು ವಿಸ್ತೀರ್ಣವು 20 ಯೂನಿಟ್‍ನಿಂದ 40ಯೂನಿಟ್‍ಗೆ ಹೆಚ್ಚಿಸಿದ್ದು, ಒಟ್ಟು ವಿಸ್ತೀರ್ಣವು 40 ಯೂನಿಟ್‍ಗಳನ್ನು ಮೀರತಕ್ಕದ್ದಲ್ಲ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ. ಇನ್ನು ಮುಂದೆ ಒಂದೇ ಕುಟುಂಬದಲ್ಲಿ ಐವರು ಸದಸ್ಯರು ಇದ್ದರೆ 108 ಎಕರೆಗಿಂತ ಹೆಚ್ಚು ಜಮೀನು ಖರೀದಿಸುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ.

2019ರಲ್ಲಿ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಸರಳಗೊಳಿಸಲು ಮತ್ತು ಸಾರ್ವಜನಿಕ ಕುಂದು-ಕೊರತೆಗಳಿಗೆ ಸೂಕ್ತವಾಗಿ ಸ್ಪಂದಿಸಲು ತಿದ್ದಿಪಡಿ ತರಲಾಗಿದೆ ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರರು ಖರೀದಿಸುವಂತಿಲ್ಲ ಎಂಬ ಭೂ ಸುಧಾರಣೆ ಕಾಯ್ದೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಕೃಷಿ ಭೂಮಿಯನ್ನು ಖಾಸಗಿ ಕಾರ್ಪೋರೇಟ್ ಕಂಪನಿಗಳು, ಉದ್ಯಮಿಗಳು ಸೇರಿದಂತೆ ಯಾರು ಬೇಕಾದರೂ ಖರೀದಿ ಮಾಡಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.

ಐಟಿ-ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರು ಹಾಗೂ ಕೆಲ ಉದ್ಯಮಿಗಳು ಕೃಷಿ ಮತ್ತು ಕೈಗಾರಿಕೆ ಮೇಲಿನ ಆಸಕ್ತಿ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಅವರಿಗೆ ಕೃಷಿ ಭೂಮಿ ಖರೀದಿಸಲು ಅನುಕೂಲ ಆಗುವಂತೆ ತಿದ್ದುಪಡಿ ತರಲಾಗಿದೆ. ರಾಜ್ಯದಲ್ಲಿನ ನಿರ್ಬಂಧದಿಂದಾಗಿ ಹಲವು ಮಂದಿ ಹೊರ ರಾಜ್ಯಗಳಲ್ಲಿ ಭೂಮಿ ಖರೀದಿಸುತ್ತಿದ್ದರು ಎಂದು ಸರಕಾರ ಹೇಳುತ್ತಿದೆ.

12 ವಿಧೇಯಕಗಳ ಮಂಡನೆ: ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಸೇರಿದಂತೆ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೆ ತಿದ್ದುಪಡಿ), ರಾಜ್ಯ ಸಿವಿಲ್ ಸೇವೆಗಳ ವಿಧೇಯಕ, ಭಿಕ್ಷಾಟನೆ ನಿಷೇಧ(ತಿದ್ದುಪಡಿ), ಕನ್ನಡ ವಿಶ್ವ ವಿದ್ಯಾಲಯ ಮತ್ತು ಇತರೆ ಕಾನೂನುಗಳ ವಿಧೇಯಕ, ರಾಜ್ಯ ಮುಕ್ತ ವಿವಿ(ತಿದ್ದುಪಡಿ), ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕ, ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ), ಸಾಂಕ್ರಾಮಿಕ ರೋಗಗಳ ವಿಧೇಯಕ, ಪೌರಸಭೆಗಳ (ತಿದ್ದುಪಡಿ) ವಿಧೇಯಕ ಸೇರಿದಂತೆ ಒಟ್ಟು 12 ವಿಧೇಯಕಗಳನ್ನು ಮಂಡನೆ ಮಾಡಲಾಗಿದೆ.

`ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ ಮಂಡಿಸಿದ್ದು, 1961ರ (ಅಧಿನಿಯಮ (10) 79ಎ, 79ಬಿ, 79 ಸಿ ಪ್ರಕರಣಗಳನ್ನು ಬಿಟ್ಟುಬಿಡುವ ಪ್ರಸ್ತಾಪ ಮಾಡಲಾಗಿದೆ. `ಎ' ವರ್ಗದ ನೀರಾವರಿ ಭೂಮಿಯು ಕೃಷಿ ಉದ್ದೇಶಕ್ಕೆ ಮಾತ್ರ ಮಾರಾಟ ಮಾಡುವ ಪ್ರಸ್ತಾಪ ಮಾಡಲಾಗಿದೆ. ಕೃಷಿ ಭೂಮಿಯನ್ನು ಖರೀದಿಸುವುದರ ಮೇಲಿನ ಮತ್ತು ಕೃಷಿ ಭೂಮಿಯನ್ನು ಖರೀದಿಸುವವನು ಅಂಥ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಮಾತ್ರ ಬಳಸುವುರ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News