ಮೈಸೂರು ಲ್ಯಾಂಪ್ಸ್ ಗೆ ಸೇರಿದ ಆಸ್ತಿ ಸರಕಾರದ ವಶಕ್ಕೆ ಪಡೆಯಲು ಸೂಕ್ತ ನಿರ್ಧಾರ: ಜಗದೀಶ್ ಶೆಟ್ಟರ್

Update: 2020-09-22 13:25 GMT

ಬೆಂಗಳೂರು, ಸೆ.22: ನಗರದಲ್ಲಿರುವ ಮೈಸೂರು ಲ್ಯಾಂಪ್ಸ್ ಗೆ ಸೇರಿದ ಭೂಮಿಯನ್ನು ಸರಕಾರದ ಅಧೀನದಲ್ಲಿರುವ ಕಂಪೆನಿಗೆ ಬಿಟ್ಟುಕೊಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ, ಮುಖ್ಯಮಂತ್ರಿ ಹಾಗೂ ಸಂಬಂಧಿಸಿದವರೊಂದಿಗೆ ಚರ್ಚಿಸಿ ಅದನ್ನು ಸರಕಾರದ ವಶಕ್ಕೆ ಪಡೆಯಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್‍ನಲ್ಲಿ ಪ್ರಶ್ನೋತರ ವೇಳೆಯಲ್ಲಿ ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 1936ರಲ್ಲಿ ಸ್ಥಾಪನೆಯಾದ ಮೈಸೂರು ಲ್ಯಾಂಪ್ಸ್ ಕಾರ್ಖಾನೆಗೆ ಮೈಸೂರು ಮಹಾರಾಜರು 22 ಎಕರೆ ಭೂಮಿ ಕೊಟ್ಟಿದ್ದರು. ನಷ್ಟದ ಕಾರಣದಿಂದಾಗಿ 2002ರಲ್ಲಿ ಕಾರ್ಖಾನೆಯನ್ನು ಮುಚ್ಚಲಾಗಿದೆ. ಕಾರ್ಖಾನೆ ಮುಚ್ಚಿದ ಬಳಿಕ ಕಾರ್ಮಿಕರು ಹಾಗೂ ಇತರರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಹೀಗಾಗಿ, ಭೂಮಿಯನ್ನು ಸರಕಾರ ವಶಕ್ಕೆ ಪಡೆದಿಲ್ಲ ಎಂದು ಹೇಳಿದರು.

ನಗರದ ಹೃದಯ ಭಾಗವಾದ ಯಶವಂತಪುರ ಮತ್ತು ಮಲ್ಲೇಶ್ವರಂ ಪ್ರದೇಶದಲ್ಲಿರುವ ಮೈಸೂರು ಲ್ಯಾಂಪ್ಸ್ ಗೆ ಸೇರಿದ 22 ಎಕರೆ ಭೂಮಿಯು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. ಅದನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸರಕಾರ ಮುಂದಾಗಿದ್ದು, ಅದರ ಹಿಂದೆ ದೊಡ್ಡ ಷಡ್ಯಂತರವಿದೆ ಎಂದು ವಿಪಕ್ಷದ ಸದಸ್ಯರು ಆಪಾದಿಸಿದರು.

ನಗರದ ಮಧ್ಯದಲ್ಲಿರುವ ಈ ಭೂಮಿಗೆ ಪ್ರತಿ ಎಕರೆಗೆ ಕನಿಷ್ಠ 10 ಕೋಟಿಯಿಂದ 30 ಕೋಟಿ ರೂ.ವರೆಗೂ ಬೆಲೆ ಇದೆ. ಅದನ್ನು ಸರಕಾರ ನೇರವಾಗಿ ತನ್ನ ವಶಕ್ಕೆ ತೆಗೆದುಕೊಳ್ಳದೆ ಕಾರ್ಖಾನೆ ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಕಂಪೆನಿಯು ಯಾರಿಗೆ ಬೇಕಾದರೂ ಮಾರಾಟ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಹೊರಟ್ಟಿ ದೂರಿದರು.

ಕೋರ್ಟ್ ನಲ್ಲಿ ಕಾರ್ಮಿಕರು ತಮ್ಮ ವೇತನ, ಭತ್ಯೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ಅದಕ್ಕೂ ಭೂಮಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ, ಆ ಭೂಮಿಯನ್ನು ಖಾಸಗಿಯವರಿಗೆ ಒಪ್ಪಿಸಬೇಡಿ ಎಂದು ವಿಪಕ್ಷದ ಸದಸ್ಯರು ಆಗ್ರಹಿಸಿದರು. ಈ ನಡುವೆ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಮತ್ತಿತರರು ನಿಮ್ಮ ಕಾಲದಲ್ಲಿ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಅನ್ಯರ ಪಾಲಾಗದಂತೆ ತಡೆಯಿರಿ ಎಂದು ಆಗ್ರಹಿಸಿದರು.

ಏಮ್ಸ್ ಮಾದರಿ ಮಾಡಿ: ನಗರದ ಮಧ್ಯಭಾಗದಲ್ಲಿರುವ 22 ಎಕರೆ ಜಮೀನಿನಲ್ಲಿ ಏಮ್ಸ್ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬಹುದು ಎಂದು ಆಡಳಿತ ಪಕ್ಷದ ಸದಸ್ಯೆ ತೇಜಸ್ವಿನಿ ಸಲಹೆ ನೀಡಿದರು. ಇದಕ್ಕೆ ವಿಪಕ್ಷದ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಅಲ್ಲದೆ, ಆ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಮಂತ್ರಿಗಳ ವಸತಿ ಗೃಹ, ಸರಕಾರಿ ಕಚೇರಿಗಳನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News