ಕಳೆದ 3 ವರ್ಷಗಳಲ್ಲಿ ಭಾರತದ ಗಡಿಯುದ್ದಕ್ಕೂ ವಾಯುನೆಲೆ,ಹೆಲಿಕಾಪ್ಟರ್ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟುಗೊಳಿಸಿದ ಚೀನಾ

Update: 2020-09-22 14:38 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.22: ಭೂತಾನಕ್ಕೆ ಸೇರಿದ ಭೂಪ್ರದೇಶದಲ್ಲಿ 2017ರಲ್ಲಿ ಸೃಷ್ಟಿಯಾಗಿದ್ದ ಭಾರತದೊಂದಿಗಿನ ಡೋಕ್ಲಾಂ ಬಿಕ್ಕಟ್ಟು ಚೀನಾದ ವ್ಯೂಹಾತ್ಮಕ ಗುರಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಿರುವಂತಿದೆ. ಚೀನಾ ಕಳೆದ ಮೂರು ವರ್ಷಗಳಲ್ಲಿ ಭಾರತದೊಂದಿಗಿನ ಗಡಿಯ ಮುಂಚೂಣಿ ಪ್ರದೇಶದಲ್ಲಿ ತನ್ನ ವಾಯುನೆಲೆಗಳು,ವಾಯು ರಕ್ಷಣಾ ತಾಣಗಳು ಮತ್ತು ಹೆಲಿಕಾಪ್ಟರ್ ನಿಲ್ದಾಣಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದೆ.

ಪ್ರಮುಖ ಜಾಗತಿಕ ಭೂರಾಜಕೀಯ ಬೇಹುಗಾರಿಕೆ ವೇದಿಕೆ ಸ್ಟ್ರಾಟ್‌ಫರ್ ಇನ್ನಷ್ಟೇ ಬಿಡುಗಡೆಗೊಳಿಸಬೇಕಿರುವ ವರದಿಯಲ್ಲಿ ಚೀನಿ ವಿಸ್ತರಣೆಗಳ ಬಗ್ಗೆ ವಿವರಗಳಿವೆ. ಭಾರತದ ಭದ್ರತೆಯ ಮೇಲೆ ಪರಿಣಾಮವನ್ನುಂಟು ಮಾಡುವ ಮಿಲಿಟರಿ ಸ್ಥಾವರಗಳ ಉಪಗ್ರಹ ಚಿತ್ರಗಳ ವಿವರವಾದ ವಿಶ್ಲೇಷಣೆಯ ಮೂಲಕ ಚೀನಾದ ಮಿಲಿಟರಿ ಮೂಲಸೌಕರ್ಯ ನಿರ್ಮಾಣಗಳ ಸ್ಥೂಲಚಿತ್ರವನ್ನು ವರದಿ ನೀಡಿದೆ.

ಹಾಲಿ ಲಡಾಖ್ ಬಿಕ್ಕಟ್ಟಿಗೆ ಸ್ವಲ್ಪವೇ ಮೊದಲು ಗಡಿಯುದ್ದಕ್ಕೂ ಚೀನಾ ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಂಡಿರುವುದು ತನ್ನ ಗಡಿಪ್ರದೇಶಗಳಲ್ಲಿ ನಿಯಂತ್ರಣವನ್ನು ಪ್ರತಿಪಾದಿಸುವ ಅದರ ಪ್ರಯತ್ನಗಳ ಭಾಗವಾಗಿದೆ ಎಂದು ಸ್ಟ್ರಾಟ್‌ಫರ್‌ನ ಹಿರಿಯ ಜಾಗತಿಕ ವಿಶ್ಲೇಷಕ ಮತ್ತು ವರದಿಯ ಲೇಖಕ ಸಿಮ್ ಟಾಕ್ ಹೇಳಿದ್ದಾರೆ.

ಗಮನಾರ್ಹವೆಂದರೆ ಚೀನಾ ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವಿನ್ನೂ ಪೂರ್ಣಗೊಂಡಿಲ್ಲ. ಹಲವಾರು ಕಡೆಗಳಲ್ಲಿ ಇನ್ನೂ ಅದು ಪ್ರಗತಿಯಲ್ಲಿದೆ. ಹೀಗಾಗಿ ಭಾರತದೊಂದಿಗಿನ ಗಡಿಯಲ್ಲಿ ಕಂಡುಬರುತ್ತಿರುವ ಚೀನಿ ಮಿಲಿಟರಿ ಚಟುವಟಿಕೆ ದೀರ್ಘಾವಧಿಯ ಉದ್ದೇಶದ ಆರಂಭ ಮಾತ್ರವಾಗಿದೆ ಎಂದು ವರದಿಯು ಹೇಳಿದೆ. ಭಾರತದ ಮೇಲೆ ಇದರ ಪರಿಣಾಮಗಳು ಸ್ಪಷ್ಟವಾಗಿವೆ. ಪೂರ್ಣಗೊಂಡ ಬಳಿಕ ಈ ಮೂಲಸೌಕರ್ಯಗಳು ಚೀನಾದ ಕಾರ್ಯಾಚರಣೆಗಳಿಗೆ ಇನ್ನಷ್ಟು ಹೆಚ್ಚಿನ ತೀವ್ರತೆಯನ್ನು ನೀಡಲಿವೆ ಎಂದಿದೆ.

  ಮೂರು ವಾಯುನೆಲೆಗಳು,ಐದು ವಾಯು ರಕ್ಷಣಾ ತಾಣಗಳು ಮತ್ತು ಐದು ಹೆಲಿಕಾಪ್ಟರ್ ನಿಲ್ದಾಣಗಳು ಸೇರಿದಂತೆ ಕನಿಷ್ಠ 13 ನೂತನ ಮಿಲಿಟರಿ ಮೂಲಸೌಕರ್ಯಗಳನ್ನು ಚೀನಾ ಭಾರತದೊಂದಿಗಿನ ಗಡಿಯಲ್ಲಿ ನಿರ್ಮಿಸುತ್ತಿದೆ. ಈ ಪೈಕಿ ನಾಲ್ಕು ಹೆಲಿಕಾಪ್ಟರ್ ನಿಲ್ದಾಣಗಳ ನಿರ್ಮಾಣ ಕಾರ್ಯ ಮೇ ತಿಂಗಳಿನಲ್ಲಿ ಲಡಾಖ್ ಬಿಕ್ಕಟ್ಟು ಉಂಟಾದ ಬಳಿಕ ಆರಂಭಗೊಂಡಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News