ವ್ಯಕ್ತಿಯನ್ನು ಕೊಲೆಗೈದು ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಕಾರ್ಮಿಕ

Update: 2020-09-22 14:47 GMT

ಚಿಕ್ಕಮಗಳೂರು, ಸೆ.22: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದ ವ್ಯಕ್ತಿ ಘಟನೆಯಿಂದ ಹೆದರಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ತಾಲೂಕಿನ ಶಿರವಾಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಧರ್ವಗಿರಿ ಗ್ರಾಮದಲ್ಲಿ ನಡೆದಿದೆ.  

ಹತ್ಯೆಗೊಳಗಾದ ವ್ಯಕ್ತಿಯನ್ನು ಶಿರವಾಸೆ ಗ್ರಾಮದ ಕೂಲಿ ಕಾರ್ಮಿಕ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಅದೇ ಗ್ರಾಮದ ಬಸಪ್ಪ ಎಂದು ಗುರುತಿಸಲಾಗಿದ್ದು, ಮೃತರಿಬ್ಬರು ಶಿರವಾಸೆ ಗ್ರಾಮದ ಎಸ್ಟೇಟ್‍ ವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಕಾರ್ಮಿಕರ ಲೈನ್ ಮನೆಗಳಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಶಿರವಾಸೆ ಗ್ರಾಮದ ಗಂಧರ್ವಗಿರಿ ಎಸ್ಟೇಟ್‍ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಕಾರ್ಮಿಕರ ಕುಟುಂಬಗಳೂ ಕೆಲ ವರ್ಷಗಳಿಂದ ಎಸ್ಟೇಟ್‍ನ ಲೈನ್ ಮನೆಗಳಲ್ಲಿ ವಾಸವಾಗಿದ್ದವು. ಎರಡು ಕುಟುಂಬಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದು, ಈ ಪೈಕಿ ಬಸಪ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ.

ಮಂಗಳವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ನೀರಿನ ವಿಚಾರದಲ್ಲಿ ಕೃಷ್ಣಪ್ಪ ಹಾಗೂ ಬಸಪ್ಪ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸದ್ದಾರೆ. ಕೆಲ ಹೊತ್ತು ಜಗಳವಾಡಿದ ಬಳಿಕ ಬಸಪ್ಪ ಕತ್ತಿಯೊಂದರಿಂದ ಕೃಷ್ಣಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣಪ್ಪ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಅಸುನೀಗಿದ್ದಾನೆಂದು ತಿಳಿದುಬಂದಿದೆ.

ತಾನು ಮಾಡಿದ ಹಲ್ಲೆಯಿಂದಾಗಿ ಕೃಷ್ಣಪ್ಪ ಅಸುನೀಗಿದ್ದನ್ನು ಕಂಡ ಬಸಪ್ಪ, ತೀವ್ರವಾಗಿ ಭೀತಿಗೊಳಗಾಗಿದ್ದ. ಕೂಡಲೇ ತನ್ನ ಮನೆಗೆ ಹಿಂದಿರುಗಿ ಬಸಪ್ಪ ಮನೆಯಲ್ಲಿದ್ದ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದ್ದು, ಸ್ಥಳಕ್ಕೆ ಮಲ್ಲಂದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News