ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ದೀಪ ಆರಿಸಿದರೂ ಮೃತದೇಹ ಸಾಗಿಸಲು ಆಂಬುಲೆನ್ಸ್ ಸಿಗಲಿಲ್ಲ

Update: 2020-09-22 16:10 GMT

ಬೆಂಗಳೂರು, ಸೆ. 22: `ಪ್ರಧಾನಿ ಮೋದಿಯವರ ಮಾತು ಕೇಳಿ ಜನ ಕೊರೋನ ನಿಯಂತ್ರಣಕ್ಕೆ ಚಪ್ಪಾಳೆ ತಟ್ಟಿದವರು, ಗಂಟೆ ಬಾರಿಸಿದವರು, ದೀಪ ಆರಿಸಿದವರ ಕುಟುಂಬಗಳ ಸದಸ್ಯರಿಗೇ ಕೊರೋನ ಸೋಂಕು ಬಂದಾಗ ಆಸ್ಪತ್ರೆಗಳಲ್ಲಿ ಹಾಸಿಗೆ(ಬೆಡ್)ಗಳು ಸಿಗಲಿಲ್ಲ. ಜೀವ ಉಳಿಸುವ ವೆಂಟಿಲೇಟರ್ ಗಳು ದೊರೆಯಲಿಲ್ಲ. ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು-ಮೃತದೇಹ ಸಾಗಿಸಲು ಆಂಬುಲೆನ್ಸ್ ಗಳೂ ಸಿಗಲಿಲ್ಲ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದಿರಲಿ, ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೂ ದಿನಗಟ್ಟಲೆ ಕಾಯುವ ಸ್ಥಿತಿ ಬಂದೊದಗಿತ್ತು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಕೊರೋನ ಸೋಂಕಿನ ನಿರ್ವಹಣೆ ಹಾಗೂ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳನ್ನು ಪ್ರಸ್ತಾಪಿಸಿದ ಅವರು, ಸೋಂಕು ಪರೀಕ್ಷೆ ಮಾಡಿಸಿಕೊಂಡರೂ ವರದಿ ಬರಲು ವಾರಗಟ್ಟಲೆ ಸಮಯ ಬೇಕಾಯಿತು. ಅಲ್ಲಿವರೆಗೂ ಸೋಂಕಿತರು ನರಳುತ್ತಲೆ ಇತರರಿಗೂ ಸೋಂಕು ಹರಡಿತು. ಸೋಂಕಿತರನ್ನು ನಡೆಸಿಕೊಳ್ಳುತ್ತಿದ್ದ ರೀತಿ, ಆಸ್ಪತ್ರೆಗಳ ಅವ್ಯವಸ್ಥೆ, ಬೆಡ್‍ಗಳು ಸಿಗದಿರುವುದು, ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಟ, ಆಂಬುಲೆನ್ಸ್ ಗಾಗಿ ಕಾಯುತ್ತಾ ರಸ್ತೆಯಲ್ಲೇ ಗಂಟೆಗಟ್ಟಲೆ ಸೋಂಕಿತರು ಕಾಯುತ್ತಾ ನರಳುತ್ತಿದ್ದರೂ ಸರಕಾರ, ಮಂತ್ರಿಗಳ ಹೃದಯ ಕೆಲಸ ಮಾಡಲಿಲ್ಲ. ಕೇವಲ ಬಾಯಿ ಮಾತಿನ ಹೇಳಿಕೆಗಳಲ್ಲೇ ನಾಲ್ಕೈದು ತಿಂಗಳು ಕಳೆದವು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನವರಿ ತಿಂಗಳಲ್ಲೆ ಪ್ರಪಂಚದ ಹಲವು ಕಡೆಗಳಲ್ಲಿ ಸೋಂಕು ಕಾಣಿಸಿಕೊಂಡರೂ, ಫೆ.24-25ಕ್ಕೆ ನಮಸ್ತೆ ಟ್ರಂಪ್ ಕಾರ್ಯಕ್ರಮ ಗುಜರಾತ್‍ನ ಅಹಮದಾಬಾದ್‍ನ ಸರ್ಧಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯಿತು. ಅಲ್ಲಿ ಒಂದು ಲಕ್ಷದಷ್ಟು ಮಂದಿ ಸೇರಿದ್ದರು. ದಿಲ್ಲಿಯ ನಿಜಾಮುದ್ದೀನ್ ಮರ್ಕಝ್ ನಲ್ಲಿ ತಬ್ಲೀಗಿ ಧಾರ್ಮಿಕ ಸಭೆ ಮಾ.10ರಿಂದ 13ರ ವರೆಗೆ ನಡೆಸಲು ಅವಕಾಶ ನೀಡಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯ ಮಾ.13ರಂದು, `ಕೊರೋನ ಬಗ್ಗೆ ಜನ ಆತಂಕ ಪಡುವ ಅಗತ್ಯವಿಲ್ಲ. ಕೊರೋನ ತುರ್ತ ನಿಗಾ ವಹಿಸಬೇಕಾದ ಸಂಗತಿ ಅಲ್ಲ' ಎಂದು ಹೇಳಿಕೆ ನೀಡಿತ್ತು.

ಆದರೆ, ವಿಶ್ವ ಆರೋಗ್ಯ ಸಂಸ್ಥೆ ಮಾ.11ರಂದೇ ಕೋವಿಡ್-19 ಸಾಂಕ್ರಾಮಿಕ ಎಂದು ಘೋಷಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಎಂದು ಘೋಷಿಸಿದ ಎರಡು ದಿನದ ಬಳಿಕವೂ ಕೇಂದ್ರ ಆರೋಗ್ಯ ಸಚಿವಾಲಯ ಕೊರೋನ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಸರಕಾರ ಮೈ ಮರೆತಿತ್ತು ಎನ್ನುವುದಕ್ಕೆ ಉದಾಹರಣೆ. ಕೊರೋನ ದೇಶಾದ್ಯಂತ ವ್ಯಾಪಿಸಲು ಶುರು ಮಾಡಿದಾಗ ದೇಶದ ಪ್ರಧಾನಿ ಮೋದಿ ದೇಶದ ಜನಕ್ಕೆ ಚಪ್ಪಾಳೆ ತಟ್ಟಲು ಕರೆ ಕೊಟ್ಟರು. ಮಾ.22ರಂದು ಚಪ್ಪಾಳೆ ತಟ್ಟಿದ್ದೂ ಆಯಿತು ಎಂದು ಲೇವಡಿ ಮಾಡಿದರು.

ಸೋಂಕಿನ ಭೀತಿಯಿಂದ ಜನ ಸರಕಾರವನ್ನು, ಆಸ್ಪತ್ರೆಗಳನ್ನು ಕಂಡರೆ ಭಯ ಬೀಳಲು ಆರಂಭ ಮಾಡಿದರು. ಕೊರೋನ ಸಂದರ್ಭದಲ್ಲಿ ಸರಕಾರ ಮತ್ತು ಮಂತ್ರಿಗಳು ಕನಿಷ್ಠವಾದರೂ ಹೃದಯಂತಿಕೆಯಿಂದ ವರ್ತಿಸಬೇಕಿತ್ತು. ಮಕ್ಕಳ ಬಗ್ಗೆ ಪೋಷಕರು, ಪೋಷಕರ ಬಗ್ಗೆ ಮಕ್ಕಳು, ಹಿರಿಯ ನಾಗರಿಕರೆಲ್ಲಾ ಒಂದಲ್ಲಾ ಒಂದು ರೀತಿಯ ಆತಂಕ, ಸಂಕಟ, ದುಗುಡದಲ್ಲಿ ಮುಳುಗಿದ್ದಾಗ ಮಂತ್ರಿಗಳು ಪಾಲು ಹಂಚಿಕೆಗಾಗಿ ಕಚ್ಚಾಡುತ್ತಿದ್ದರು. ಇಡೀ ಸಮಾಜ ಒಂದು ಸಣ್ಣ ಭರವಸೆ, ಆಸರೆಗಾಗಿ ಸರಕಾರದ ಕಡೆ ಮುಖ ಮಾಡಿದ್ದರೆ ಸರಕಾರ ಜನರಿಗೆ ಬೆನ್ನು ತೋರಿಸಿ ಇಡೀ ಸಮಾಜದಲ್ಲಿ ಅನಾಥ ಪ್ರಜ್ಞೆ ಕಾಡುವಂತಾಯಿತು ಎಂದು ಟೀಕಿಸಿದರು.

ನ್ಯಾಯಾಂಗ ತನಿಖೆಗೆ ಒತ್ತಾಯ: ಕೊರೋನ ಸೋಂಕನ್ನು ತಡೆಗಟ್ಟುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು, ವೆಂಟಿಲೇಟರ್, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೇರಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಅಂಕಿ-ಅಂಶಗಳನ್ನು ದಾಖಲೆಗಳ ಸಮೇತ ಬಹಿರಂಗಪಡಿಸಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸರಕಾರವನ್ನು ಆಗ್ರಹಿಸಿದರು.

ವೈದ್ಯಕೀಯ ಉಪಕರಣಗಳ ಖರೀದಿ ಹಗರಣ ದೊಡ್ಡದಿದೆ. ಇಲ್ಲಿ ಪಾರದರ್ಶಕತೆ ಇಲ್ಲ. ಉಪಕರಣ ಖರೀದಿಗೆ ಎರಡು, ಮೂರು, ನಾಲ್ಕು ಪಟ್ಟು ಹೆಚ್ಚಿನ ಮೊತ್ತವನ್ನು ನೀಡಲಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಮನಸೋ ಇಚ್ಛೆ ವೆಚ್ಚ ಮಾಡಲಾಗಿದ್ದು, ಇದಕ್ಕೆ ಸರಕಾರ ಉತ್ತರ ನೀಡಬೇಕು. ಆದರೆ, ಈ ವರೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸರಕಾರ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಈ ಹಗರಣವನ್ನು ನ್ಯಾಯಾಂಗ ತನಿಖೆ ಒಪ್ಪಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ತನಿಖೆ ನಡೆಸಿದರೆ ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ತನಿಖೆಯಾಗದಿದ್ದರೆ ತಪ್ಪಿತಸ್ಥರ ಪತ್ತೆ ಸಾಧ್ಯವಿಲ್ಲ. ಸತ್ಯಾಂಶ ಹೊರ ಬರುವುದಿಲ್ಲ. ನ್ಯಾಯಾಂಗ ತನಿಖೆ ಅಗತ್ಯ. ಇಲ್ಲದಿದ್ದರೆ ಹಣ್ಣು ತಿಂದುವರು ಬಚಾವಾಗುತ್ತಾರೆ. ಸಿಪ್ಪೆ ತಿಂದವರು ಸಿಕ್ಕಿ ಹಾಕಿಕೊಳ್ಳುವಂತಾಗುತ್ತದೆ. ಆದುದರಿಂದ ಈ ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಬೇಕಾಬಿಟ್ಟಿ ಖರ್ಚು: ಬೆಂಗಳೂರು ಮಹಾನಗರದಲ್ಲಿ `ಕಂಟೈನ್ಮೆಂಟ್ ಝೋನ್'ಗಳ ನಿಗದಿಯಲ್ಲೂ ಅವ್ಯವಹಾರಗಳು ನಡೆದಿವೆ. 34 ಸಾವಿರ ಕಂಟೈನ್ಮೆಂಟ್ ಝೋನ್‍ಗಳಿಗೆ ಯದ್ವಾತದ್ವಾ ಹಣ ವೆಚ್ಚವಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸೂಕ್ತ ಸಂದರ್ಭದಲ್ಲಿ ಅಗತ್ಯ ಮುನ್ನಚ್ಚರಿಕೆ ಕೈಗೊಂಡಿದ್ದರೆ ಸೋಂಕು ನಿಯಂತ್ರಣ ಮಾಡಬಹುದಿತ್ತು. ಆದರೆ, ಸರಕಾರ ಸಂಪೂರ್ಣ ಎಡವಿದೆ ಎಂದು ದೂರಿದರು.

ಸೋಂಕಿಗೆ ಅತ್ಯಂತ ಶೀಘ್ರವೇ ಔಷಧಿ ಕಂಡು ಹಿಡಿಯಬೇಕು. ಜನಸಾಮಾನ್ಯರು ಕೊರೋನ ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಕೊರೋನ ಬಂದು ಹೋದ ಮೇಲೂ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಸೋಂಕಿನ ಬಗ್ಗೆ ನಿರ್ಲಕ್ಷ್ಯತೆ ಸರಿಯಲ್ಲ. ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಗಮನಸೆಳೆದರು.

ಪ್ಯಾಕೇಜ್ ಜನರಿಗೆ ತಲುಪಿಲ್ಲ: ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ರೈತರು ಸೇರಿದಂತೆ ಇನ್ನಿತರ ಸಮುದಾಯಗಳಿಗೆ ಸರಕಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ, ಅದು ಸಮರ್ಪಕವಾಗಿ ಜನರಿಗೆ ತಲುಪಿಲ್ಲ. ನಾನು ಸಿಎಂ ಸ್ಥಾನದಲ್ಲಿ ಇದ್ದಿದ್ದರೆ ಸಾಲ ಮಾಡಿಯಾದರೂ ಅಸಂಘಟಿತ ಕಾರ್ಮಿಕರು ಮತ್ತು ವಿವಿಧ ಸಮುದಾಯಗಳಿಗೆ ಕನಿಷ್ಠ 10 ಸಾವಿರ ರೂ.ನೆರವು ನೀಡುತ್ತಿದ್ದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News