ಸರಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ ಮಂಡನೆ

Update: 2020-09-22 16:56 GMT

ಬೆಂಗಳೂರು, ಸೆ. 22: ಆಯವ್ಯಯದ ಹೊರತಾಗಿ ಇತರೆ ಮೂಲಗಳಿಂದ(ನಿಗಮ ಮಂಡಳಿ, ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು) ಸಾಲ ಪಡೆದಿರುವ ಸರಕಾರದ ಕ್ರಮದಿಂದ, ರಾಜ್ಯ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬ ಗಂಭೀರವಾದ ಅಂಶವನ್ನು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಇಂದಿಲ್ಲಿ ಬಹಿರಂಗಪಡಿಸಿದೆ.

ಮಂಗಳವಾರ ವಿಧಾನಸಭೆಯಲ್ಲಿ ಸಿಎಜಿ ವರದಿ ಮಂಡನೆಯಾಗಿದ್ದು, ರಾಜ್ಯ ಸರಕಾರ ತನ್ನ ಬಳಿ ಹಣವಿದ್ದರೂ ಸಾಲ ಎತ್ತುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 2019ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ರಾಜ್ಯ ಹಣಕಾಸು ಲೆಕ್ಕಪರಿಶೋಧನೆಯ ಮೊದಲ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸಿಎಜಿ, 2018-19ರ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲದ (2,85,238 ಕೋಟಿ ರೂ) ಇದರ ಶೇ.5ರಷ್ಟು ಅಂದರೆ 14,862 ಕೋಟಿ ರೂ.ಗಳಷ್ಟನ್ನು ಬಜೆಟ್ ಹೊರತಾದ ಮೂಲಗಳಿಂದ ಎತ್ತಲಾಗಿದೆ ಎಂದು ಸಿಎಜಿ ಉಲ್ಲೇಖಿಸಿದೆ.

ಸರಕಾರದ ಖಾತರಿಯ ಮೇಲೆ ತನ್ನ ಅಧೀನದಲ್ಲಿರುವ ಸಂಸ್ಥೆಗಳು ಸಾಲ ತೆಗೆದುಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಮನಸೋ ಇಚ್ಛೆ ಸಾಲ ತೆಗೆಯುತ್ತಿರುವುದರಿಂದ ರಾಜ್ಯಕ್ಕೆ ನಿಗದಿ ಪಡಿಸಿರುವ ವಿತ್ತೀಯ ಕೊರತೆ ಮಿತಿ ಮುರಿದು ಬೀಳಬಹುದು. ರಾಜ್ಯದಲ್ಲಿ ಈಗಾಗಲೇ ವಿತ್ತೀಯ ಕೊರತೆ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಸೂಚ್ಯಂಕ(ಜಿಎಸ್‍ಡಿಪಿ)ದ ದರ ಈಗಾಗಲೇ ಹೆಚ್ಚುತ್ತಿದೆ ಎಂದು ಪ್ರಧಾನ ಮಹಾಲೇಕ್ಕಪಾಲರಾದ ನಿವೇದಿತಾ ಅವರು ಸುದ್ದಿಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕಕ್ಕೆ ಕಡಿಮೆ ಅನುದಾನ: ಸ್ಥಳೀಯ ಸಂಸ್ಥೆಗಳು, ನಿಗಮ, ಮಂಡಳಿ, ಪ್ರಾಧಿಕಾರಗಳ ಸಾಲ ಮಾಡುವ ಚಾಳಿಗೆ ಕಡಿವಾಣ ಹಾಕಬೇಕು. ಹಾಗೆಯೇ ನಿಗಮ, ಮಂಡಳಿಗಳ ಈ ಬಜೆಟ್ ಹೊರತಾದ ಬಾಧ್ಯತೆಯನ್ನು ಸ್ಪಷ್ಟವಾಗಿ ಗುರುತಿಸಿ, ವರದಿ ಮಾಡಬೇಕು. ರಾಜ್ಯವು ಕೇರಳ, ತಮಿಳುನಾಡುಗಳಿಗೆ ಹೋಲಿಸಿದರೆ ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ ಕಡಿಮೆ ಖರ್ಚು ಮಾಡುತ್ತಿದೆ. ಆದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಇನ್ನಷ್ಟು ಕಡಿಮೆ ಅನುದಾನ ನೀಡುತ್ತಿದೆ ಎಂಬ ಅಂಶವನ್ನು ಪತ್ತೆ ಮಾಡಿದೆ.

2018-19ರ ಸಾಲಿನಲ್ಲಿ 15,400 ಕೋಟಿ ರೂ.ಸಬ್ಸಿಡಿ ರೂಪದಲ್ಲಿ ವಿನಿಯೋಗಿಸಿದ್ದು ಇದರಲ್ಲಿ ಸಿಂಹಪಾಲು ಇಂಧನದ ಸಬ್ಸಿಡಿಯದಾಗಿದೆ. ವಿದ್ಯುತ್ (7,593 ಕೋಟಿ ರೂ.), ಆಹಾರ (2,402 ಕೋಟಿ ರೂ), ಕೃಷಿ ಮತ್ತು ಕೃಷಿಗೆ ಸಂಬಂಧ ಪಟ್ಟ ಚಟುವಟಿಕೆ (2,336ಕೋಟಿ ರೂ.), ಸಹಕಾರ (777 ಕೋಟಿ ರೂ.)ರಷ್ಟು ಸಬ್ಸಿಡಿ ನೀಡಲಾಗಿದೆ. ಅಂದರೆ ರಾಜ್ಯದ ಒಟ್ಟು ಸಬ್ಸಿಡಿಯ ಅರ್ಧದಷ್ಟು ವಿದ್ಯುತ್ ಸಬ್ಸಿಡಿಯ ರೂಪದಲ್ಲಿದೆ. ಹಾಗೆಯೇ ನಷ್ಟ ಉಂಟು ಮಾಡುವ ಸಂಸ್ಥೆಗಳಲ್ಲಿ ಹಣ ಹೂಡುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ ಎಂದು ಸಿಎಜಿ ತಕರಾರು ತೆಗೆದಿದೆ

ಆದಾಯ ಸಂಗ್ರಹಕ್ಕೆ ಸೂಚನೆ: ತೆರಿಗೆಯೇತರ ಮೂಲಗಳಿಂದ ರಾಜ್ಯಕ್ಕೆ ಬರುತ್ತಿರುವ ಆದಾಯ ಬಹಳ ಕಡಿಮೆ. ಹೀಗಾಗಿ ತೆರಿಗೇಯೇತರ ಮೂಲಗಳಿಂದ ಆದಾಯ ಸಂಗ್ರಹಿಸುವಂತೆ ಖರ್ಚು ಸುಧಾರಣಾ ಸಮಿತಿ ಶಿಫಾರಸ್ಸು ಮಾಡಿದೆ. 2014-19ರ ಸಾಲಿನಲ್ಲಿ ತೆರಿಗೇಯತರ ಮೂಲಗಳಿಂದ ಕೇವಲ ಶೇ.0.48 ರಿಂದ ಶೇ.0.52ರಷ್ಟು ಮಾತ್ರ ಆದಾಯ ಸಂಗ್ರಹವಾಗಿದೆ. ಆದ್ದರಿಂದ ತೆರಿಗೇಯೇತರ ಮೂಲಗಳಿಂದ ಹೆಚ್ಚು ಆದಾಯ ಸಂಗ್ರಹ ಮಾಡಲು ಸರಕಾರ ಮುಂದಾಗಬೇಕು ಎಂದು ಸಿಎಜಿ ಸೂಚಿಸಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News