ಬಂಧಿತ ಪತ್ರಕರ್ತ ರಾಜೀವ್ ಶರ್ಮಾ ಹಿಂದೆ ದೊಡ್ಡ ತಿಮಿಂಗಿಲಗಳಿವೆ: ಎಸ್‍ಡಿಪಿಐ

Update: 2020-09-22 17:50 GMT

ಹೊಸದಿಲ್ಲಿ, ಸೆ.22: ಈ ವರ್ಷದ ಎಪ್ರಿಲ್ ದ್ವಿತೀಯಾರ್ಧದಿಂದ ಭಾರತೀಯ ಭೂಪ್ರದೇಶದೊಳಗೆ ಒಳನುಗ್ಗಲು ಚೀನಾ ಪ್ರಾರಂಭಿಸಿದೆ ಮತ್ತು ಸುಮಾರು 38,000 ಚದರ ಕಿ.ಮೀ. ಭಾರತೀಯ ಭೂಮಿಯನ್ನು ಈಗ ಚೀನಾ ಆಕ್ರಮಿಸಿಕೊಂಡಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಈ ವಿಷಯದಲ್ಲಿ ಭಾರತ ಈಗಾಗಲೇ ತನ್ನ 20 ಸೈನಿಕರ ಅಮೂಲ್ಯ ಜೀವಗಳನ್ನು ತ್ಯಾಗ ಮಾಡಿದೆ. ಕೇಂದ್ರ ಸರಕಾರವು ತನ್ನ ಪುಕ್ಕಲು ಆಡಂಬರದ ಮಾತುಗಳು ಮತ್ತು ಚೀನೀ ಉತ್ಪನ್ನಗಳನ್ನು ನಿಷೇಧಿಸುವ ತಮಾಷೆಯ ಕ್ರಿಯೆಯ ಹೊರತಾಗಿ ದೇಶದ ಭೂಪ್ರದೇಶವನ್ನು ರಕ್ಷಿಸಲು ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಕಿಡಿಗಾರಿದ್ದಾರೆ.

ಚೀನಾ ಸೈನಿಕರಿಂದ, ಭಾರತೀಯ ಭೂ ಪ್ರದೇಶದ ಆಕ್ರಮಣದ ಮಧ್ಯೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ಸಂಘಿ ಥಿಂಕ್ ಟ್ಯಾಂಕ್ ಆಗಿರುವ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಶನ್ (ವಿಐಎಫ್) ಜೊತೆ ಸಂಬಂಧ ಹೊಂದಿರುವ ಪತ್ರಕರ್ತ ರಾಜೀವ್ ಶರ್ಮಾ ಎಂಬವರನ್ನು ಚೀನಾದ ಮಹಿಳೆಯೊಂದಿಗೆ ಭಾರತೀಯ ಸೈನ್ಯದ ವರ್ಗೀಕೃತ ದಾಖಲೆಗಳೊಂದಿಗೆ ಬಂಧಿಸಲಾಗಿದೆ. ಬಂಧನಕ್ಕೊಳಗಾಗಿರುವ ರಾಜೀವ್ ಶರ್ಮಾ ಕೇವಲ ಒಂದು ಸಣ್ಣ ಇಣುಕು ಮಾತ್ರವಾಗಿದ್ದು, ಅವರ ಹಿಂದೆ ದೊಡ್ಡ ತಿಮಿಂಗಿಲಗಳಿವೆ ಎಂದು ಹೇಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬೇಹುಗಾರಿಕೆ ಪ್ರಕರಣದಲ್ಲಿ ಭಾಗಿಯಾದ ದೊಡ್ಡ ಶಾರ್ಕ್‍ಗಳ ಪಾತ್ರವನ್ನು ಹೊರಗೆ ತರಲು ನಿಷ್ಪಕ್ಷಪಾತ ತನಿಖೆ ಮತ್ತು ವಿಚಾರಣೆ ನಡೆಸಬೇಕಾಗಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸುವುದು, ದೇಶದ್ರೋಹದ ಆರೋಪ ಮತ್ತು ಅವರ ದೇಶಪ್ರೇಮವನ್ನು ಪ್ರಶ್ನಿಸುವುದು ಸಂಘಿಗಳ ಧರ್ಮಾಂಧತೆಯ ಚಾಳಿಯಾಗಿದೆ ಎಂದು ಅಬ್ದುಲ್ ಮಜೀದ್ ಕಿಡಿಗಾರಿದ್ದಾರೆ.

ಆದಾಗ್ಯೂ, ಇಲ್ಲಿಯವರೆಗೆ ವಿದೇಶಗಳಿಗೆ ಬೇಹುಗಾರಿಕೆ ಮಾಡಿದ ವಿಷಯದಲ್ಲಿ ಪ್ರಕರಣ ದಾಖಲಾಗಿರುವ ಎಲ್ಲ ಅಪರಾಧಿಗಳು ಸ್ವಯಂಘೋಷಿತ ದೇಶಭಕ್ತರೇ ಆಗಿದ್ದಾರೆ. ಸೇನೆಯ ವರ್ಗೀಕೃತ ದಾಖಲೆಗಳನ್ನು ಚೀನಾಕ್ಕೆ ಹಸ್ತಾಂತರಿಸುವಲ್ಲಿ ಸಂಘಿ ಥಿಂಕ್ ಟ್ಯಾಂಕ್  ಆಗಿರುವ ವಿವೇಕಾನಂದ ಫೌಂಡೇಶನ್‍ನೊಂದಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿಯ ಪಾಲ್ಗೊಳ್ಳುವಿಕೆ ಅತ್ಯಂತ ಆತಂಕಕಾರಿಯಾಗಿದೆ. ಸಂಘಿಗಳಿಗೆ ದೇಶಭಕ್ತಿ ಎಂಬುದು ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸಲು ಮತ್ತೊಂದು ಜುಮ್ಲಾವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬೇಹುಗಾರಿಕೆ ವಿಷಯದಲ್ಲಿ ಪ್ರಧಾನಮಂತ್ರಿಗಳ ಕಚೇರಿಯ (ಪಿಎಂಒ) ಪಾತ್ರವನ್ನು ತನಿಖೆ ನಡೆಸಬೇಕು. ಏಕೆಂದರೆ ಲಡಾಖ್‍ನಲ್ಲಿ ಚೀನಾದೊಂದಿಗಿನ ಸಂಘರ್ಷ ಉದ್ವಿಗ್ನಗೊಂಡಾಗ, ಭಾರತವು ಬೀಜಿಂಗ್ ಮೂಲದ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್‍ಮೆಂಟ್ ಬ್ಯಾಂಕ್ (ಎಐಐಬಿ) ಎಂದು ಕರೆಯಲ್ಪಡುವ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕಿನಿಂದ 9,202 ಕೋಟಿ ರೂ.ಸಾಲವನ್ನು ಪಡೆದುಕೊಂಡಿದೆ ಎಂದು ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಮೌನ ಅಥವಾ ವಿರೋಧ ಪಕ್ಷಗಳ ಅತ್ಯಂತ ನಿಷ್ಕ್ರಿಯ ಪ್ರತಿಕ್ರಿಯೆ ದೇಶವನ್ನು ಹಾಳುಮಾಡಲು ಮೋದಿ ಮತ್ತು ಅವರ ತಂಡಕ್ಕೆ ಇನ್ನಷ್ಟು ಸಹಾಯ ಮಾಡಲಿವೆ. ವಿರೋಧ ಪಕ್ಷಗಳು ತಮ್ಮ ಉದಾಸೀನತೆ, ಮೌನ ಮತ್ತು ನಿಷ್ಕ್ರಿಯತೆಯನ್ನು ಬಿಟ್ಟು ಎಚ್ಚೆತ್ತುಕೊಳ್ಳದಿದ್ದರೆ, ಭಾರತ ಎಂಬ ಒಂದು ಸುಂದರ ದೇಶವು ಆರೆಸ್ಸೆಸ್ ಮತ್ತು ಸಂಘ ಪರಿವಾರದ ಕೈಯಲ್ಲಿ ಅಪಾಯಕ್ಕೆ ಒಳಗಾಗುವುದಕ್ಕೆ ಭಾರತೀಯರು ಸಾಕ್ಷಿಯಾಗಬೇಕಾಗಬಹುದು ಎಂದು ಅಬ್ದುಲ್ ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News