ದೆಹಲಿ ವಿಧಾನಸಭೆ ಸಮನ್ಸ್ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲು ಏರಿದ ಫೇಸ್‌ಬುಕ್ ಉಪಾಧ್ಯಕ್ಷ

Update: 2020-09-23 03:47 GMT

ಹೊಸದಿಲ್ಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸದನದಲ್ಲಿ ಸಾಕ್ಷ್ಯ ನುಡಿಯಲು ಸೂಚಿಸಿ ದೆಹಲಿ ವಿಧಾನಸಭೆಯ ಸಮಿತಿ ನೀಡಿದ ಸಮನ್ಸ್ ವಿರುದ್ಧ ಫೇಸ್‌ಬುಕ್ ಇಂಡಿಯಾ ಉಪಾಧ್ಯಕ್ಷ ಅಜಿತ್ ಮೋಹನ್ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಈ ಅರ್ಜಿ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ದೆಹಲಿ ಗಲಭೆ ವಿಚಾರದಲ್ಲಿ ಫೇಸ್‌ಬುಕ್‌ಗೆ ತೊಡಕು ಉಂಟು ಮಾಡಲು ಸಮಿತಿ ಮುಖ್ಯಸ್ಥರು ನಿರ್ಧರಿಸಿದಂತಿದ್ದು, ಇದು ಪೂರ್ವಾಗ್ರಹಪೀಡಿತ ಕ್ರಮ ಎನ್ನುವುದು ಅರ್ಜಿದಾರರ ವಾದ. ನ್ಯಾಯಮೂರ್ತಿ ಸಂಜೀವ ಕೃಷ್ಣ ಕೌಲ್ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ಅರ್ಜಿಯ ವಿಚಾರಣೆ ನಡೆಸಲಿದೆ.

"ಶಾಸಕಾಂಗ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಿದ ಪ್ರಕರಣಗಳನ್ನು ಹೊರತುಪಡಿಸಿ, ಯಾವ ವ್ಯಕ್ತಿಯ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಅಧಿಕಾರ ಶಾಸನಸಭೆಗಾಗಲೀ, ಶಾಸನಸಭೆ ನೇಮಕ ಮಾಡಿದ ಸಮಿತಿಗಾಗಲೀ ಇಲ್ಲ" ಎಂದು ಅರ್ಜಿದಾರರು ವಾದಿಸಿದ್ದಾರೆ. ಸಂವಿಧಾನದ 14, 19 ಮತ್ತು 21ನೇ ವಿಧಿ ಅನ್ವಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲಾಗಿದೆ. ಕಾನೂನು ಅನುಮತಿ ನೀಡದೇ ನಾಗರಿಕ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಸಮನ್ಸ್ ನೀಡುವ ಮುನ್ನ ಅಂದರೆ ಆ. 31ರಂದು ಸಮಿತಿಯ ಅಧ್ಯಕ್ಷ ರಾಘವ್ ಛಡ್ಡಾ ಪತ್ರಿಕಾಗೋಷ್ಠಿ ನಡೆಸಿ, ದೆಹಲಿ ಗಲಭೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ಸಂಸ್ಥೆಯನ್ನು ಸಹ ಆರೋಪಿಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದರು. ಫೇಸ್‌ಬುಕ್, ಗಲಭೆಕೋರರು ಮತ್ತು ಸಮಾಜಘಾತುಕ ಶಕ್ತಿಗಳ ಸಂಘಟಿತ ಸಂಚು ಇದು ಎಂದು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News