ಪ್ರತಿಪಕ್ಷಗಳ ಬಹಿಷ್ಕಾರದ ಮಧ್ಯೆ ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಸಂಹಿತೆ ಮಸೂದೆಗಳಿಗೆ ಅಂಗೀಕಾರ

Update: 2020-09-23 14:26 GMT

ಹೊಸದಿಲ್ಲಿ,ಸೆ.23: ಬುಧವಾರ ಅತ್ತ ಹೊರಗೆ ಪ್ರತಿಪಕ್ಷಗಳ ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ ರಾಜ್ಯಸಭೆಯು ನಾಲ್ಕು ಕಾರ್ಮಿಕ ಸಂಹಿತೆ ಮಸೂದೆಗಳನ್ನು ಅಂಗೀಕರಿಸಿದೆ. ಈ ಮಸೂದೆಗಳು ಸರಕಾರದ ಪ್ರಮುಖ ಕಾರ್ಮಿಕ ಸುಧಾರಣೆಗಳನ್ನೊಳಗೊಂಡಿವೆ. ವೇತನ ಮಸೂದೆ ಸಂಹಿತೆಯು ಈಗಾಗಲೇ ಅಂಗೀಕಾರಗೊಂಡಿದೆ.

ಮಂಗಳವಾರದಿಂದ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಬಹಿಷ್ಕರಿಸಿರುವ ಪ್ರತಿಪಕ್ಷಗಳು ವಿವಾದಾತ್ಮಕ ಮಸೂದೆಗಳನ್ನು ಏಕಪಕ್ಷೀಯವಾಗಿ ಅಂಗೀಕರಿಸಬಾರದು ಎಂದು ಕೋರಿ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರವನ್ನು ಬರೆದಿದ್ದವು. ಹಾಗೆ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ಕಳಂಕವಾಗುತ್ತದೆ ಎಂದು ಅವು ಒತ್ತಿ ಹೇಳಿದ್ದವು. ಮಸೂದೆಗಳ ಅಂಗೀಕಾರದ ಬಳಿಕ ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ಅನಿರ್ದಿಷ್ಟಾವಧಿಗೆ ಮಂದೂಡಲಾಗಿದೆ. ಈವರೆಗೆ 25ಕ್ಕೂ ಅಧಿಕ ಸಂಸದರು ಸೋಂಕಿಗೆ ತುತ್ತಾಗಿದ್ದಾರೆ.

ವೃತ್ತಿ ಸುರಕ್ಷತೆ,ಆರೋಗ್ಯ ಮತ್ತು ಕೆಲಸದ ಸ್ಥಿತಿಗಳ ಸಂಹಿತೆ 2020,ಔದ್ಯೋಗಿಕ ಸಂಬಂಧಗಳ ಸಂಹಿತೆ 2020 ಮತ್ತು ಸಾಮಾಜಿಕ ಸುರಕ್ಷತೆ ಸಂಹಿತೆ 2020 ಈ ಮೂರು ಮಸೂದೆಗಳನ್ನು ಲೋಕಸಭೆಯು ಮಂಗಳವಾರ ಅಂಗೀಕರಿಸಿತ್ತು. ಇನ್ನೀಗ ರಾಷ್ಟ್ರಪತಿಗಳ ಅಂಕಿತದ ಬಳಿಕ ಈ ಮಸೂದೆಗಳು ಶಾಸನಗಳಾಗಲಿವೆ.

ಮೇಲ್ಮನೆಯಲ್ಲಿ ಮಸೂದೆಗಳನ್ನು ಮಂಡಿಸಿದ ಸಹಾಯಕ ಕಾರ್ಮಿಕ ಸಚಿವ ಸಂತೋಷ ಗಂಗ್ವಾರ್ ಅವರು,ಈ ಮಸೂದೆಗಳು ಕಾರ್ಮಿಕರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲಿವೆ. ಸಾಮಾಜಿಕ ಸುರಕ್ಷತಾ ಲಾಭಗಳನ್ನೂ ಇವುಗಳಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದರು.

ತನ್ಮಧ್ಯೆ ಕೃಷಿ ಮತ್ತು ಕಾರ್ಮಿಕ ಮಸೂದೆಗಳನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳ ಸಂಸದರು ತಮ್ಮ ಪ್ರತಿಭಟನೆಯ ಅಂಗವಾಗಿ ಬುಧವಾರ ಸಂಸತ್ ಭವನ ಆವರಣದಲ್ಲಿಯ ಗಾಂಧಿ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆಯವರೆಗೆ ಜಾಥಾ ನಡೆಸಿದರು.

ಈ ಮಸೂದೆಗಳು ವಿಶ್ವವ್ಯಾಪಿ ಕಾರ್ಮಿಕ ಮಾನದಂಡಗಳಿಗೆ ಅನುಗುಣವಾಗಿ ಸುಧಾರಣೆಗಳನ್ನು ತರಲಿವೆ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ನೆರವಾಗಲಿವೆ ಎಂದು ಸರಕಾರವು ಪ್ರತಿಪಾದಿಸಿದೆ.

300ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಸರಕಾರದ ಅನುಮತಿಯಿಲ್ಲದೆ ಮುಚ್ಚಲು ಹಾಗೂ ಕಾರ್ಮಿಕರನ್ನು ವಜಾಗೊಳಿಸಲು 16 ರಾಜ್ಯಗಳು ಈಗಾಗಲೇ ಅವಕಾಶ ನೀಡಿವೆ ಎಂದು ಗಂಗ್ವಾರ್ ತಿಳಿಸಿದರು.

   ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದನ್ನು ಮಸೂದೆಗಳು ಸುಲಭಗೊಳಿಸಲಿವೆ ಮತ್ತು ಅವರ ಪ್ರತಿಭಟನೆಯ ಹಕ್ಕುಗಳನ್ನು ನಿರ್ಬಂಧಿಸಲಿವೆ ಎಂದು ಪ್ರತಿಪಕ್ಷಗಳು ಮತ್ತು ಕಾರ್ಮಿಕ ಒಕ್ಕೂಟಗಳು ವಾದಿಸಿವೆ. ಔದ್ಯೋಗಿಕ ಸಂಬಂಧಗಳ ಮಸೂದೆಯು 300ರವರೆಗೆ ನೌಕರರನ್ನು ಹೊಂದಿರುವ ಕಂಪನಿಗಳು ರಾಜ್ಯಸರಕಾರದ ಅನುಮತಿಯಿಲ್ಲದೆ ಅವರನ್ನು ಕೆಲಸದಿಂದ ವಜಾ ಮಾಡಲು ಅವಕಾಶ ನೀಡುತ್ತದೆ. ಈವರೆಗೆ 100ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಮಾತ್ರ ಹೀಗೆ ಮಾಡಲು ಅವಕಾಶವಿತ್ತು. ಇದೇ ಮಸೂದೆಯಡಿ ಕೈಗಾರಿಕೆಗಳ ಕಾರ್ಮಿಕರು 60 ದಿನಗಳ ನೋಟಿಸ್ ನೀಡದೇ ಮುಷ್ಕರದಲ್ಲಿ ತೊಡಗುವಂತಿಲ್ಲ. ಈವರೆಗೆ ಇಂತಹ ನಿಯಮಗಳು ನೀರು ಪೂರೈಕೆ,ವಿದ್ಯುತ್,ನೈಸರ್ಗಿಕ ಅನಿಲ,ದೂರವಾಣಿ ಮತ್ತು ಇತರ ಅಗತ್ಯ ಸಾರ್ವಜನಿಕ ಸೇವೆಗಳಲ್ಲಿ ದುಡಿಯುವವರಿಗೆ ಮಾತ್ರ ಅನ್ವಯವಾಗುತ್ತಿತ್ತು. ಅಗತ್ಯ ಸೇವೆಗಳಲ್ಲಿರುವ ಉದ್ಯೋಗಿಗಳು ಮುಷ್ಕರಕ್ಕೆ ಮುನ್ನ ಆರು ವಾರಗಳ ನೋಟಿಸ್ ನೀಡುವುದು ಕಡ್ಡಾಯವಾಗಿದೆ.

  ಸಾಮಾಜಿಕ ಸುರಕ್ಷಾ ಮಸೂದೆ ಕುರಿತ ಸಂಹಿತೆಯು ಉಬರ್,ಓಲಾ,ಸ್ವಿಗ್ಗಿ ಮತ್ತು ರೊಮಾಟೊಗಳಂತಹ ಆ್ಯಪ್ ಆಧಾರಿತ ಕಂಪನಿಗಳ ನೌಕರರಿಗೆ ಮಾತ್ರ ಸಾಮಾಜಿಕ ಸುರಕ್ಷತಾ ನಿಧಿಗಳ ಸೌಲಭ್ಯವನ್ನು ವಿಸ್ತರಿಸಲು ನೆರವಾಗುತ್ತದೆ. ಆದರೆ ಹೆಚ್ಚಾಗಿ ಯಾವುದೇ ಕಾರ್ಮಿಕ ಕಾನೂನಿನ ವ್ಯಾಪ್ತಿಯಿಂದ ಹೊರಗಿರುವ ಈ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳ ಅಗತ್ಯವಿದೆ ಎಂದು ಕಾರ್ಮಿಕ ಒಕ್ಕೂಟಗಳು ಹೇಳಿವೆ.

ವೃತ್ತಿ ಸುರಕ್ಷತೆ ಮತ್ತು ಆರೋಗ್ಯ ಕುರಿತು ಮಸೂದೆಯು ಫ್ಯಾಕ್ಟರಿಗಳು,ಗಣಿಗಳು ಮತ್ತು ಹಡಗುಕಟ್ಟ್ಟೆಗಳಲ್ಲಿ ದುಡಿಯುತ್ತಿರುವವರಿಗೆ ಮಾತ್ರ ನೆರವಾಗುತ್ತದೆ ಮತ್ತು ಅದು ಸಾರ್ವತ್ರಿಕ ಸ್ವರೂಪವನ್ನು ಹೊಂದಿಲ್ಲ ಎನ್ನುವುದು ಕಾರ್ಮಿಕ ಒಕ್ಕೂಟಗಳ ವಾದವಾಗಿದೆ.

ಸಂಘಪರಿವಾರಕ್ಕೆ ಸೇರಿರುವ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ವೂ ಕಾರ್ಮಿಕ ಸಂಹಿತೆ ಮಸೂದೆಗಳನ್ನು ವಿರೋಧಿಸಿದೆ. ಹಲವಾರು ಬೇಡಿಕೆಗಳನ್ನು ಮಂಡಿಸಿರುವ ಅದು,ಮಸೂದೆಗಳನ್ನು ಅವಸರದಿಂದ ಅಂಗೀಕರಿಸಲಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News