ಕೇಂದ್ರ ಸರಕಾರದ ಕೃಷಿ ವಿಧೇಯಕ ವಿರೋಧಿಸಿ 2 ಕೋಟಿ ರೈತರ ಸಹಿ ಸಂಗ್ರಹ: ರಾಜ್ಯಸಭಾ ಸದಸ್ಯ ಡಾ.ನಾಸಿರ್ ಹುಸೇನ್

Update: 2020-09-23 13:49 GMT

ಬೆಂಗಳೂರು, ಸೆ.23: ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ರೈತ ವಿರೋಧಿ ಕೃಷಿ ವಿಧೇಯಕಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಎರಡು ಕೋಟಿ ರೈತರ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಳುಹಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ತಿಳಿಸಿದ್ದಾರೆ.

ಹೊಸದಿಲ್ಲಿಯ ಸಂಸತ್ ಭವನದ ಬಳಿ ಪ್ರತಿಭಟನಾ ನಿರತವಾಗಿದ್ದ ನಾಸಿರ್ ಹುಸೇನ್ ‘ವಾರ್ತಾಭಾರತಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರೈತ ವಿರೋಧಿ ಕೃಷಿ ವಿಧೇಯಕಕ್ಕೆ ಅಂಕಿತ ಹಾಕದಂತೆ ವಿರೋಧ ಪಕ್ಷಗಳ ಮುಖಂಡರ ನಿಯೋಗವು ರಾಷ್ಟ್ರಪತಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ನಾಳೆ(ಸೆ.24) ಎಲ್ಲ ವಿರೋಧ ಪಕ್ಷಗಳು ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಪಂಚಾಯತ್ ಮಟ್ಟದಲ್ಲಿ ಧರಣಿಯನ್ನು ನಡೆಸಲಿವೆ ಎಂದರು.

ಕಾಂಗ್ರೆಸ್ ಪಕ್ಷದ ವತಿಯಿಂದ ದೇಶದಾದ್ಯಂತ ನಾಳೆ(ಸೆ.24) ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಒಂದು ತಿಂಗಳುಗಳ ಕಾಲ ವಿವಿಧ ಕಡೆ ಕಿಸಾನ್ ಸಮ್ಮೇಳನ, ಪ್ರತಿಭಟನೆಗಳನ್ನು ನಡೆಸಲಿದ್ದೇವೆ. ಅಲ್ಲದೆ, ಎರಡು ಕೋಟಿ ರೈತರ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಮೂರು ಕೃಷಿ ವಿಧೇಯಕಗಳನ್ನು ತಂದಿದೆ. ಈ ಮೂರು ವಿಧೇಯಕಗಳು ರೈತ ವಿರೋಧಿಯಾಗಿವೆ. ಎಪಿಎಂಸಿ ಮಾರುಕಟ್ಟೆ ತೆರವುಗೊಳಿಸುವುದು, ಮಂಡಿಗಳನ್ನು ತೆರವುಗೊಳಿಸುವುದು, ರೈತ ಬೆಳೆದ ಬೆಳೆಗಳಿಗೆ ಎಂಎಸ್‍ಪಿ (ಕನಿಷ್ಠ ಬೆಂಬಲ ಬೆಲೆ) ಬಗ್ಗೆ ಚಕಾರವೆತ್ತುವಂತಿಲ್ಲ. ಇಂತಹ ಅನೇಕ ರೈತ ವಿರೋಧಿ ಅಂಶಗಳು ಈ ವಿಧೇಯಕಗಳಲ್ಲಿ ಇದೆ ಎಂದು ನಾಸಿರ್ ಹುಸೇನ್ ತಿಳಿಸಿದರು.

ಮಾರುಕಟ್ಟೆಗಳು, ಮಂಡಿಗಳು ಇಲ್ಲದೆ ಹೋದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು ಎಂದು ಪ್ರಶ್ನಿಸಿದ ಅವರು ಈ ಎಲ್ಲ ಅಂಶಗಳ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಬೇಕು ಎಂದು ಹೇಳಿದರು.

ಅಲ್ಲದೆ, ಈ ವಿಧೇಯಕವನ್ನು ಸಂಸತ್ತಿನ ಸೆಲೆಕ್ಟ್ ಕಮಿಟಿಗೆ ನೀಡಬೇಕು. ಅಲ್ಲಿ ವಿಸ್ತೃತವಾಗಿ ಚರ್ಚೆ ನಡೆದ ನಂತರ, ಆ ಸಮಿತಿ ನೀಡುವ ವರದಿಯ ಮೇಲೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಸರಕಾರ ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎಂದು ನಾಸಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.

ರವಿವಾರ ಮಧ್ಯಾಹ್ನ 1 ಗಂಟೆಗೆ ಸದನ ಮುಂದೂಡಬೇಕಾಗಿದ್ದರೂ, ವಿರೋಧ ಪಕ್ಷದ ನಾಯಕರ ಗಮನಕ್ಕೆ ತರದೆ, ಪಕ್ಷಗಳಿಗೂ ಮಾಹಿತಿ ನೀಡದೆ, ಏಕಾಏಕಿ ಸಮಯವನ್ನು ವಿಸ್ತರಿಸಿ ಅಪೂರ್ಣ ಚರ್ಚೆಯಾಗಿದ್ದ ವಿಧೇಯಕವನ್ನು ಮತಕ್ಕೆ ಹಾಕಿದರು. ನಾವು ಅದನ್ನು ವಿರೋಧಿಸಿದೆವು. ಈ ವಿಧೇಯಕದ ಮೇಲಿನ ಚರ್ಚೆ ಅಪೂರ್ಣವಾಗಿದೆ, ಇನ್ನು ಹಲವು ಸದಸ್ಯರು ಚರ್ಚೆ ಮಾಡಬೇಕು, ಸಂಬಂಧಪಟ್ಟ ಸಚಿವರು ಉತ್ತರ ನೀಡಬೇಕು, ಕೆಲವು ತಿದ್ದುಪಡಿಗಳನ್ನು ಅದಕ್ಕೆ ತರಬೇಕಿದೆ. ಆನಂತರ ಮತಕ್ಕೆ ಹಾಕಿ ಎಂದು ಮನವಿ ಮಾಡಿದರೂ ಸರಕಾರ ಅದಕ್ಕೆ ಅವಕಾಶ ಕಲ್ಪಿಸಿಲ್ಲ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರಕಾರದ ಓರ್ವ ಸಚಿವೆ ಹರ್ಸಿಮ್ರತ್ ಕೌರ್ ಈ ವಿಧೇಯಕಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಮಿತ್ರಪಕ್ಷಗಳಾದ ಬಿಜೆಡಿ, ಎಐಡಿಎಂಕೆ, ಟಿಆರ್‍ಎಸ್, ಅಕಾಲಿದಳ ಇವರೆಲ್ಲರೂ ವಿಧೇಯಕದ ವಿರುದ್ಧ ಮತ ಚಲಾಯಿಸಲಿದ್ದರು. ಬಿಜೆಪಿ ಬಳಿ ರಾಜ್ಯಸಭೆಯಲ್ಲಿ ಅಗತ್ಯ ಸಂಖ್ಯೆ ಇರಲಿಲ್ಲ. ನಾವು ಡಿವಿಷನ್‍ಗೆ ಹಾಕುವಂತೆ ಕೋರಿದರೂ, ಅವರು ಧ್ವನಿಮತದ ಮೂಲಕ ಅಂಗೀಕಾರ ಪಡೆದುಕೊಂಡಿದ್ದಾರೆ ಎಂದು ನಾಸಿರ್ ಹುಸೇನ್ ತಿಳಿಸಿದರು.

ಸದನದಲ್ಲಿ ಗದ್ದಲ ಮಾಡಿದರು ಎಂದು ಹೇಳಿ ಸೋಮವಾರ ನಾನು ಸೇರಿದಂತೆ ಕಾಂಗ್ರೆಸ್ ಪಕ್ಷದ ಮೂವರು, ಟಿಎಂಸಿ ಹಾಗೂ ಎಡಪಕ್ಷಗಳ ತಲಾ ಇಬ್ಬರು, ಒಬ್ಬ ಆಮ್ ಆದ್ಮಿ ಪಕ್ಷದ ಸದಸ್ಯರನ್ನು ಅಮಾನತು ಮಾಡಲಾಯಿತು. ಇದನ್ನು ವಿರೋಧಿಸಿಯೂ ನಾವು ಧರಣಿ ಮಾಡಿದೆವು. ಅವರು ಪದೇ ಪದೇ ಸದನ ಮುಂದೂಡಿದರೂ ನಾವು ಹಿಂಜರಿಯಲಿಲ್ಲ. ಸದಸ್ಯರನ್ನು ಅಮಾನತು ಮಾಡಬೇಕಾದರೂ ಮತದಾನ ಮಾಡಬೇಕಾಗುತ್ತದೆ. ಆದರೆ ಅದನ್ನು ಮಾಡಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯಸಭೆಯಲ್ಲಿ ಬಿಜೆಪಿ ಬಳಿ ಅಗತ್ಯ ಸಂಖ್ಯಾಬಲ ಇಲ್ಲ. ಆದುದರಿಂದ, ಅವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ವಿರೋಧ ಪಕ್ಷದ ಎಂಟು ಸದಸ್ಯರನ್ನು ಅಮಾನತು ಮಾಡುವ ಮೂಲಕ, ವಿರೋಧ ಪಕ್ಷಗಳ ಸಂಖ್ಯಾಬಲವನ್ನು ಕುಸಿಯುವಂತೆ ಮಾಡಿದ್ದಾರೆ. ಸೋಮವಾರದಿಂದ ನಾವು ಅಹೋರಾತ್ರಿ ಧರಣಿ ಕೈಗೊಂಡೆವು ಎಂದು ನಾಸಿರ್ ಹುಸೇನ್ ತಿಳಿಸಿದರು.

ನಿನ್ನೆ ಎಲ್ಲ ವಿಪಕ್ಷಗಳು ಒಗ್ಗಟ್ಟಾಗಿ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆ ಯುವವರೆಗೂ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸುವುದಾಗಿ ನಿರ್ಣಯ ಪ್ರಕಟಿಸಿವೆ ಎಂದು ಅವರು ಹೇಳಿದರು. 

Writer - ಅಮ್ಜದ್‍ ಖಾನ್ ಎಂ.

contributor

Editor - ಅಮ್ಜದ್‍ ಖಾನ್ ಎಂ.

contributor

Similar News