ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್

Update: 2020-09-23 16:04 GMT

ಬೆಂಗಳೂರು, ಸೆ. 23: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿರುವುದಿಲ್ಲ ಹಾಗೂ ಗುಣಮಟ್ಟದ ಉಪಕರಣಗಳನ್ನು ಖರೀದಿಸಿದ ಬೆಲೆಯನ್ನು ಇತರೆ ರಾಜ್ಯಗಳ ಖರೀದಿಗೆ ಹೋಲಿಕೆ ಮಾಡಿ ಆರೋಪ ಮಾಡುತ್ತಿರುವುದರಲ್ಲಿ ಸತ್ಯಾಂಶ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ವಿಪಕ್ಷಗಳ ಎಲ್ಲ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಸದಸ್ಯರ ಆಕ್ಷೇಪಗಳಿಗೆ ಉತ್ತರ ನೀಡಿದ ಅವರು, ಯಾವುದೇ ಉಪಕರಣಗಳು ಅವುಗಳ ಗುಣಮಟ್ಟ ಹಾಗೂ ನಾವೀನ್ಯತೆ ಮತ್ತು ವೈಶಿಷ್ಟತೆಗಳ ಆದಾರದ ಮೇಲೆ ಬೆಲೆಯನ್ನು ನಿಗದಿ ಪಡಿಸಲಾಗಿರುತ್ತದೆ. ಅವುಗಳ ಆದಾರದ ಮೇಲೆ ಉತ್ತಮ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.

ಇತರೆ ರಾಜ್ಯಗಳು ಕಡಿಮೆ ಬೆಲೆಯಲ್ಲಿ ಖರೀದಿಸಿರುವ ಉಪಕರಣಗಳನ್ನು ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಬೆಲೆ ನೀಡಿ ಖರೀದಿಸಲಾಗಿದೆ ಎಂಬ ಆರೋಪದಲ್ಲಿ ಗುಣಮಟ್ಟದ ಬಗ್ಗೆ ಮಾತಿಲ್ಲ. ಅವರು ಹಾಗೂ ನಾವು ಖರೀದಿಸಿರುವ ಉಪಕರಣಗಳ ತಾಂತ್ರಿಕ ಗುಣಮಟ್ಟವನ್ನು ಹೋಲಿಕೆ ಮಾಡಿ ನೋಡಿ ಮಾತನಾಡಿ ಎಂದ ಅವರು, ಹೈ-ಡೆಫಿನೇಷನ್, ಬಹುಉಪಯೋಗಿ ಹಾಗೂ 54 ವಿವಿಧ ತಂತ್ರಾಂಶಗಳನ್ನು ಹೊಂದಿರುವ ಉತ್ತಮ ಗುಣಮಟ್ಟದ ವೆಂಟಿಲೇಟರ್ ಗಳನ್ನು ನಮ್ಮ ರಾಜ್ಯದಲ್ಲಿ ಖರೀದಿಸಲಾಗಿದ್ದು, ವೆಂಟಿಲೇಟರ್ ಗಳು ಬೇಸಿಕ್ ಮಾಡೆಲ್‍ಗಳು 4 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ವಿವಿಧ ರೀತಿಯ ಗುಣಮಟ್ಟದ ವೆಂಟಿಲೇಟರ್ ಗಳ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳಿದರು.

ಮಧ್ಯ ಕಾಲದಲ್ಲಿದ್ದೇವೆ: ಕೊರೋನ ರೋಗಕ್ಕೆ ಇನ್ನು ಲಸಿಕೆ ಬಂದಿಲ್ಲ. ರೋಗದ ಮಧ್ಯಕಾಲದಲ್ಲಿ ನಾವಿದ್ದೇವೆ. ರೋಗವನ್ನು ನಿಗ್ರಹಿಸಲು ಎಲ್ಲರ ಸಹಕಾರ ಅಗತ್ಯ. ವಿಪಕ್ಷಗಳ ಸಹಕಾರವನ್ನು ಕೋರುತ್ತೇನೆ. ಸುಮ್ಮನೆ ಆಧಾರರಹಿತ ಆರೋಪಗಳು ಬೇಡ. ಉಪಕರಣಗಳ ಖರೀದಿಗೆ 4 ಸಮಿತಿಗಳನ್ನು ರಚಿಸಲಾಗಿತ್ತು. ನಾಲ್ವರು ಸಚಿವರ ಟಾಸ್ಕ್‍ ಫೋರ್ಸ್‍ನ್ನು ಸಿಎಂ ರಚಿಸಿದ್ದರು. ಪರಿಣಿತರ ಸಮಿತಿಗಳ ಸಲಹೆಯಂತೆ ಉಪಕರಣ ಖರೀದಿಸಲಾಗಿದೆ. ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು.

ಬೇಡಿಕೆಗೆ ತಕ್ಕಂತೆ ವೈದ್ಯಕೀಯ ಉಪಕರಣಗಳ ದರದಲ್ಲಿ ವ್ಯತ್ಯಾಸಗಳಾಗಿವೆ. ಬೇಡಿಕೆ ಇದ್ದಾಗ ದರ ಹೆಚ್ಚಿತ್ತು. ಬೇಡಿಕೆ ಕಡಿಮೆಯಾದಾಗ ದರ ಕಡಿಮೆಯಾಗಿದೆ. ಅದರಂತೆ ಖರೀದಿಯೂ ನಡೆದಿದೆ. ಇದರಲ್ಲಿ ಅವ್ಯವಹಾರ ನಡೆದಿದೆ, ಭ್ರಷ್ಟಾಚಾರ ನಡೆದಿದೆ ಎಂಬುದು ಸತ್ಯಕ್ಕೆ ದೂರ. ಮಾರ್ಚ್‍ನಲ್ಲಿ ಪಿಪಿಇ ಕಿಟ್ ಬೆಲೆ 2,100ರೂ. ಇತ್ತು. ಈಗ ಅದು ಕಡಿಮೆಯಾಗಿದೆ. ಹಾಗೆಯೇ ಎನ್-95 ಮಾಸ್ಕ್ ಬೆಲೆ 140ರೂ. ಇತ್ತು. ಈಗ ಅದು ಕಡಿಮೆಯಾಗಿದೆ. ಕೊರೋನ ನಿಯಂತ್ರಣಕ್ಕೆ ವಿವಿಧ ಇಲಾಖೆಯಡಿ 4,200 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ತುರ್ತು ಅಗತ್ಯ ಇದ್ದುದರಿಂದ ಕೆಲವು ನಿಯಮಗಳನ್ನು ಪಾಲಿಸದೇ ಇರಬಹುದು. ಆದರೆ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು.

ಲಾಕ್‍ಡೌನ್ ಸಂದರ್ಭದಲ್ಲಿ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದ ಸಾವಿನ ಪ್ರಮಾಣ ಶೇ.1.5ಕ್ಕೆ ನಿಂತಿದೆ. ದೇಶದಲ್ಲಿ ದೀಪ ಹಚ್ಚುವುದು ಸಂಸ್ಕಾರ. ಅದನ್ನೆ ಅಪಹಾಸ್ಯ ಮಾಡುವುದು ಸರಿಯಲ್ಲ. ದೀಪ ಹಚ್ಚುವುದರಿಂದ ಸೋಂಕು ಹೋಗುವುದಿಲ್ಲ ಎಂಬುದು ಪ್ರಧಾನಿಯವರಿಗೂ ಗೊತ್ತಿದೆ. ಆದರೆ, ಜನರನ್ನು ಒಗ್ಗೂಡಿಸಿ ಬೆಳಕಿನಿಂದ ಈ ಅನಿಷ್ಠವನ್ನು ಹೊಡೆದು ಓಡಿಸಲು ಎಲ್ಲರಿಗೂ ಕರೆ ನೀಡಿದರು. ಆದರೆ ಇದಕ್ಕೆ ಏನೇನು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸೋಂಕಿಗೆ ಮೊದಲು ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ 3200 ಆಮ್ಲಜನಕ ಸಹಿತ ಹಾಸಿಗೆಗಳು, ವೈದ್ಯಕೀಯ ಕಾಲೇಜುಗಳಲ್ಲಿ 4 ಸಾವಿರ ಆಮ್ಲಜನಕ ಸಹಿತ ಹಾಸಿಗೆಗಳಿದ್ದವು. 6 ತಿಂಗಳಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ 19,456 ಆಕ್ಸಿಜನ್ ಹಾಸಿಗೆಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 5 ಸಾವಿರ ಆಕ್ಸಿಜನ್ ಹಾಸಿಗೆಗಳನ್ನು ಸಿದ್ದಪಡಿಸಿದ್ದೇವೆ. ಈಗ ರಾಜ್ಯದಲ್ಲಿ ಒಟ್ಟು 28,140 ಆಕ್ಸಿಜನ್ ಹಾಸಿಗೆಗಳಿವೆ. ಅಕ್ಟೋಬರ್ ಅಂತ್ಯದೊಳಗೆ 31 ಸಾವಿರ ಆಕ್ಸಿಜನ್ ಹಾಸಿಗೆಗಳು ಸಿದ್ಧವಾಗಲಿವೆ ಎಂದರು. ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿ ಸೋಂಕನ್ನು ತಡೆಯುವ ಪ್ರಯತ್ನ ಮುಂದುವರೆಯಲಿದೆ ಎಂದರು.

ಇದು ಯುದ್ಧದ ಸಮಯ. ಈ ಯುದ್ಧವನ್ನು ಎಲ್ಲರೂ ಸೇರಿ ಒಟ್ಟಾಗಿ ಎದುರಿಸಬೇಕಿದೆ. ಇದು ಪೂರ್ವನಿಯೋಜಿತ ಅಲ್ಲ. ರಾತ್ರೋರಾತ್ರಿ ಬಂದ ರೋಗ. ಹಾಗಾಗಿ ಕೆಲವು ಆರಂಭಿಕ ನ್ಯೂನತೆಗಳು ಆಗಿರಬಹುದು. ಆದರೆ, ಸೋಂಕನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸರಕಾರ ಎಲ್ಲೂ ಎಡವಿಲ್ಲ. ಪ್ರಧಾನಿ ಮೋದಿಯವರ ಲಾಕ್‍ಡೌನ್ ಬಗ್ಗೆ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿವೆ. ಆದರೆ ಲಾಕ್‍ಡೌನ್‍ನಿಂದ ಸೋಂಕು ಹರಡುವಿಕೆಯನ್ನು ಸಮರ್ಥವಾಗಿ ನಿಯಂತ್ರಿಸಿದ್ದೇವೆ

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

ಪ್ರತಿಪಕ್ಷಗಳು ಕೋವಿಡ್-19 ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ. ಸಿಎಂ ಬಿಎಸ್‍ವೈ ನೇತೃತ್ವದ ಸರಕಾರ ಅತ್ಯಂತ ಪ್ರಾಮಾಣಿಕತೆ, ದಕ್ಷತೆ ಮತ್ತು ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಸಲ್ಲದ ಆರೋಪಗಳಿಂದ ಅಧಿಕಾರಿಗಳ ಮತ್ತು ಕೊರೋನ ಯೋಧರ ಮನೋಸ್ಥೈರ್ಯ ಕುಗ್ಗಿಸುವ ಕೆಲಸವನ್ನು ವಿಪಕ್ಷಗಳು ಇನ್ನಾದರೂ ಬಿಟ್ಟು ಸರಕಾರದೊಂದಿಗೆ ಸಹಕಾರ ನೀಡಬೇಕು'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News