ತುಮಕೂರು: ಗ್ರಾಮ ಪಂಚಾಯತ್ ನೌಕರರ ಅಹೋರಾತ್ರಿ ಧರಣಿ ಅಂತ್ಯ

Update: 2020-09-23 17:11 GMT

ತುಮಕೂರು, ಸೆ.23: ಜಿಲ್ಲಾ ಪಂಚಾಂಯತ್ ಹಂತದಲ್ಲಿ ಬಗೆಹರಿಸಬಹುದಾದ ಬೇಡಿಕೆಗಳನ್ನು ಈಡೇರಿಸುವ ಭರವಸೆ ಹಿನ್ನೆಲೆಯಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ನೇತೃತ್ವದಲ್ಲಿ ನಗರದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಗ್ರಾಮ ಪಂಚಾಯತ್ ನೌಕರರು ಹಿಂತೆಗೆದುಕೊಂಡಿದ್ದಾರೆ. 

ಸೆಪ್ಟೆಂಬರ್ 22ರಿಂದ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ-2 ಗ್ರಾಮ ಪಂಚಾಯತ್ ನೌಕರರ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈಡೇರಿಸಬಹುದಾದ ಬೇಡಿಕೆಗಳ ಸಂಬಂಧ ಸೆ.30ರಂದು ಸಭೆ ಕರೆಯುವುದಾಗಿ ತಿಳಿಸಿದರು.  

ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳ ಸಂಬಂಧ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹ ಅಧಿಕಾರಿಗಳು ಕೂಡಲೇ ಮಾಹಿತಿಯನ್ನು ತಮಗೆ ರವಾನಿಸಬೇಕೆಂದು ಪತ್ರ ಬರೆಯಲಾಗಿದೆ ಎಂದು ಪತ್ರದ ಪ್ರತಿಯೊಂದನ್ನು ಸಂಘದ ಮುಖಂಡರಿಗೆ ನೀಡಿದರು.

ಇದೇ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ, ಇಎಫ್‍ಎಂಎಸ್ ಸೇರ್ಪಡೆ, ಉಪಧನ, ಬಾಕಿ ವೇತನ, ತೆರಿಗೆ ಸಂಗ್ರಹದಲ್ಲಿ 40ರಷ್ಟು ವೇತನ ಕೊಡುವುದು,14ನೇ ಹಣಕಾಸು ಆಯೋಗದಲ್ಲಿ ಶೇಕಡ 10ರ ಆಡಳಿತ ವೆಚ್ಚದಲ್ಲಿ ಸಿಬ್ಬಂದಿಗೆ ವೇತನ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಡಿ.ನಾಗೇಶ್ ಮಾತನಾಡಿ, ಬಿಲ್‍ ಕಲೆಕ್ಟರ್, ಗುಮಾಸ್ತ, ಕಂಪ್ಯೂಟರ್ ಆಪರೇಟರ್ ಗಳಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ ಜಾರಿಗೊಳಿಸಬೇಕು. ಪಂಪ್ ಆಪರೇಟರಗಳಿಂದ ಕರವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು. ಕಂಪ್ಯೂಟರ್ ಆಪರೇಟರಗಳಿಗೆ ಬಡ್ತಿ ನೀಡಲು ವೃಂದ ಮತ್ತು ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು. 

ಧರಣಿಯಲ್ಲಿ ಗುಬ್ಬಿಯ ಬಶೀರ್ ಅಹಮದ್, ಶಿವಕುಮಾರ್, ತುರುವೇಕೆರೆ ರಮೇಶ್, ತಿಪಟೂರಿನ ರಾಜು, ಕಂಪ್ಯೂಟರ್ ಆಪರೇಟರ್ ಗಂಗಣ್ಣ, ಶ್ವೇತ, ಕುಣಿಗಲ್‍ನ ಶ್ರೀನಿವಾಸ್, ಚಿ.ನಾ.ಹಳ್ಳಿಯ ಚಂದ್ರಪ್ಪ, ಲೋಕೇಶ್, ತುಮಕೂರಿನ ಪಂಚಾಕ್ಷರಿ, ಶಿರಾದ ಸಿದ್ದೇಶ್, ಲಕ್ಷ್ಮಮ್ಮ, ಚೇತನ, ಶಂಶುದ್ದೀನ್ ಉನ್ನೀಸಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News