​ದೇಶದಲ್ಲಿ 90 ಸಾವಿರಕ್ಕೇರಿದ ಕೋವಿಡ್ ಬಲಿ

Update: 2020-09-24 03:52 GMT

ಹೊಸದಿಲ್ಲಿ : ದೇಶದಲ್ಲಿ ಕೊರೋನ ವೈರಸ್ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 90 ಸಾವಿರದ ಗಡಿ ದಾಟಿದೆ. ಕಳೆದ ಹದಿಮೂರು ದಿನಗಳಲ್ಲಿ 15 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಬುಧವಾರ ದೇಶಾದ್ಯಂತ ಒಟ್ಟು 86,825 ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ತಿಂಗಳಲ್ಲಿ ಸೇರ್ಪಡೆಯಾದ ಸೋಂಕಿತರ ಸಂಖ್ಯೆ 20,44,570ಕ್ಕೇರಿದೆ. ವಿಶ್ವದಲ್ಲೇ ಯಾವುದೇ ದೇಶದಲ್ಲಿ ಒಂದು ತಿಂಗಳಲ್ಲಿ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ.

ಆದರೆ ಸತತ ನಾಲ್ಕನೇ ದಿನ ಹೊಸ ಪ್ರಕರಣಗಳ ಸಂಖ್ಯೆ 90 ಸಾವಿರಕ್ಕಿಂತ ಕೆಳಗಿರುವುದು ಸಮಾಧಾನಕರ ಅಂಶ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ ಮೂರನೇ ದಿನ 10 ಲಕ್ಷಕ್ಕಿಂತ ಕೆಳಗಿದೆ. ಬುಧವಾರ 9,72,496 ಸಕ್ರಿಯ ಪ್ರಕರಣಗಳಿದ್ದವು. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 57,27,193ಕ್ಕೇರಿದ್ದು, ಇದುವರೆಗೆ 46,63,623 ಮಂದಿ ಗುಣಮುಖರಾಗಿದ್ದಾರೆ.

ಕೇರಳದಲ್ಲಿ ಬುಧವಾರ 5376 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೊದಲ ಬಾರಿಗೆ 5 ಸಾವಿರದ ಗಡಿದಾಟಿದೆ. ಉಳಿದಂತೆ ರಾಜಸ್ಥಾನ ಹಾಗೂ ಅರುಣಾಚಲ ಪ್ರದೇಶ ಕೂಡ ಇದುವರೆಗಿನ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ಬುಧವಾರ ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News