ಜೆಎನ್ ಯು ಮಾಜಿ ವಿದ್ಯಾರ್ಥಿ ಖಾಲಿದ್ ರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ದಿಲ್ಲಿ ನ್ಯಾಯಾಲಯ

Update: 2020-09-24 15:09 GMT

ಹೊಸದಿಲ್ಲಿ, ಸೆ.24: ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ದಿಲ್ಲಿಯ ನ್ಯಾಯಾಲಯವು ಅಕ್ಟೋಬರ್ 22ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಉಮರ್ ಖಾಲಿದ್ ಅವರಿಗೆ ವಿಧಿಸಲಾಗಿದ್ದ 10 ದಿನಗಳ ಪೊಲೀಸ್ ಕಸ್ಟಡಿಯು ಇಂದು ಅಂತ್ಯಗೊಂಡಿದ್ದು, ಅವರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರ ಮುಂದೆ ಹಾಜರುಪಡಿಸಲಾಯಿತು.

ಬಂಧಿತ ಉಮರ್ ಖಾಲಿದ್ ಮೇಲೆ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಅವರಿಗೆ ಜೈಲಿನೊಳಗೆ ಭದ್ರತೆಯನ್ನು ಒದಗಿಸುವಂತೆ ಅವರ ವಕೀಲರಾದ ತ್ರಿದೀಪ್ ಪಾಯ್ಸೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಖಾಲಿದ್ ಅವರಿಗೆ ಜೈಲಿನೊಳಗಡೆ ಕನ್ನಡಕಗಳನ್ನು ಕೊಂಡೊಯ್ಯಲು ಅನುಮತಿ ನೀಡುವಂತೆಯೂ ಪಾಯ್ಸೆ ವಿನಂತಿಸಿದರು.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರೊಂದಿಗೆ ಖುದ್ದಾಗಿ ಮಾತನಾಡಿದ ಖಾಲಿದ್ ಅವರು ತಾನು ಪೊಲೀಸ್ ಕಸ್ಟಡಿಯಲ್ಲಿದ್ದ ಕಳೆದ ಹತ್ತು ದಿನಗಳ ಅವಧಿಯಲ್ಲಿ ಯಾವುದೇ ಕಾಗದ ಪತ್ರಕ್ಕೂ ಸಹಿಹಾಕಿಲ್ಲ. ಜೈಲಿನಲ್ಲಿ ತಾನು ಓದಬಯಸಿರುವ ಪುಸ್ತಕವೊಂದನ್ನು ಕೊಂಡೊಯ್ಯಲು ತನಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ತಿಹಾರ್ ಜೈಲಿಗೆ ತೆರಳುವ ಮುನ್ನ ತನ್ನ ಪಾಲಕರನ್ನು ಭೇಟಿ ಮಾಡಬಯಸುವುದಾಗಿಯೂ ಅವರು ತಿಳಿಸಿದರು.

ಖಾಲಿದ್ ಅವರು ತಿಹಾರ್ ಜೈಲಿಗೆ ತೆರಳುವ ಮುನ್ನ ಅವರಿಗೆ ವೈದ್ಯಕೀಯ ತಪಾಸಣೆ ಮತ್ತಿತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಅವಧಿಯಲ್ಲಿ ಖಾಲಿದ್‌ರ ಪಾಲಕರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಬಹುದಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆಗ ನ್ಯಾಯಾಲಯವು ಸಕಾಲದಲ್ಲಿ ಸ್ಥಳಕ್ಕೆ ತಲುಪಿ ಖಾಲಿದ್‌ರನ್ನು ಭೇಟಿಯಾಗಬಹುದಾಗಿದೆ ಎಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News