ಕೊರೋನ ಸೋಂಕು: ಕಾಂಗ್ರೆಸ್ ಶಾಸಕ ನಾರಾಯಣ ರಾವ್ ನಿಧನ

Update: 2020-09-24 12:30 GMT

ಬೆಂಗಳೂರು, ಸೆ.24: ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣ ರಾವ್(65) ಕೊರೋನ ಸೋಂಕಿನಿಂದ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ಶಾಸಕ ಬಿ. ನಾರಾಯಣ ರಾವ್ ಅವರಿಗೆ ಕೊರೋನ ಸೋಂಕು ತಗಲಿದ ಹಿನ್ನೆಲೆ ಸೆ.1ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗೆ ತೀವ್ರ ಉಸಿರಾಟದ ತೊಂದರೆಯಿಂದಾಗಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗುರುವಾರ ಮಧ್ಯಾಹ್ನ 3.55ಕ್ಕೆ ಅವರು ನಿಧಾನರಾಗಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಡಾ. ಮನೀಷ್ ರೈ ತಿಳಿಸಿದ್ದಾರೆ.

65 ವರ್ಷದ ನಾರಾಯಣರಾವ್‍ಗೆ ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಇತ್ತು. ಆಸ್ಪತ್ರೆಗೆ ದಾಖಲಾದ ಎರಡೇ ದಿನಕ್ಕೆ ಅವರ ಸ್ಥಿತಿ ಗಂಭೀರವಾಗಿತ್ತು. ಅಂದಿನಿಂದ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಅವರಿಗೆ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ವಿಶೇಷ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ.

ಮೊದಲು ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಬಿ ನಾರಾಯಣರಾವ್, 1982 ಮೊದಲ ಬಾರಿಗೆ ಮಾಳೆಗಾಂವ್ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಆಯ್ಕೆ ಆಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿ ಎಸ್.ಎಂ ಕೃಷ್ಣ ಸರಕಾರದಲ್ಲಿ 2 ವರ್ಷ ಸಾಕ್ಷರತಾ ಮಿಷನ್‍ನ ಅಧ್ಯಕ್ಷರಾಗಿದ್ದರು. 2013ರಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸ್, ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವು ರಾಜಕಾರಣಿಗಳ ಜತೆ ರಾವ್ ಗುರುತಿಸಿಕೊಂಡಿದ್ದರು. ಬಿಎ ಪದವಿ ಪಡೆದಿದ್ದ ಅವರು ಮರಾಠಿ, ಹಿಂದಿ, ಇಂಗ್ಲಿಷ್, ತೆಲುಗು ಮತ್ತು ಕನ್ನಡ ಬಾಷೆಗಳನ್ನು ಮಾತನಾಡುತ್ತಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದ  ನಾರಾಯಣರಾವ್, ಬಿಜೆಪಿಯ ಮಲ್ಲಿಕಾರ್ಜುನ ಖೂಬಾ, ಜೆಡಿಎಸ್‍ನ ಪಿ.ಜಿ.ಆರ್. ಸಿಂಧ್ಯಾ ವಿರುದ್ಧ 61,425 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

1955ರಲ್ಲಿ ಬೀದರ್ ಜಿಲ್ಲೆಯ ಬಸಂತಪುರ ಗ್ರಾಮದಲ್ಲಿ ಜನಿಸಿದ ಬಿ.ನಾರಾಯಣರಾವ್, ತಳಸಮುದಾಯಗಳಲ್ಲಿ ಒಂದಾದ ಟೋಕ್ರೆ ಕೋಳಿ ಬುಡಕಟ್ಟಿಗೆ ಸೇರಿದವರು. ಬಡ ಕೃಷಿ ಕುಟುಂಬ. ಹಳ್ಳಿಯ ಜಾತಿಯ ಅವಮಾನಗಳನ್ನು ನುಂಗಿಕೊಂಡೇ ಬಸಂತಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಬೀದರ್ ಗೆ ಬಂದು ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ವ್ಯವಸ್ಥೆಯ ವಿರುದ್ಧ ಬಂಡಾಯವೇಳುವ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ವಿದ್ಯಾರ್ಥಿ ಸಂಘಟನೆ ಹುಟ್ಟುಹಾಕಿ, ಹಿಂದುಳಿದ ವರ್ಗಗಳಿಂದ ಬಂದ ಬಡ ವಿದ್ಯಾರ್ಥಿಗಳ ಪರವಾಗಿ ಹೋರಾಟಕ್ಕಿಳಿದು ವಿದ್ಯಾರ್ಥಿ ನಾಯಕರಾಗಿದ್ದರು.

ನಾರಾಯಣ ರಾವ್ ಅವರು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿಯೇ, 1982ರಲ್ಲಿ, ಬೀದರ್ ನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿವರೆಗೆ ಮಹಾತ್ಮಾ ಬೊಮಗೊಂಡೇಶ್ವರ ಎಜುಕೇಷನ್ ಸೊಸೈಟಿ ಸ್ಥಾಪಿಸಿದರು. 1992ರಲ್ಲಿ ದೇವರಾಜ ಅರಸು ಶೈಕ್ಷಣಿಕ ದತ್ತಿ ಸ್ಥಾಪಿಸಿ ಅಲೆಮಾರಿ ರಾಜಗೊಂಡರಿಗಾಗಿ ವಸತಿಶಾಲೆ ಮತ್ತು ವೃದ್ಧಾಶ್ರಮ ಆರಂಭಿಸಿದ್ದರು.

ಶಾಸಕ ಬಿ. ನಾರಾಯಣ ರಾವ್ ನಿಧನಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ವಿ.ಸೋಮಣ್ಣ, ಬಿ.ಶ್ರೀರಾಮುಲು, ಲಕ್ಷ್ಮಣ ಸವದಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಮಂತ್ರಿ ಕೃಷ್ಣಭೈರೇಗೌಡ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News