ಯಾವುದೇ ವೆಂಟಿಲೇಟರ್ ಮಾಡೆಲ್ ಕೂಡ ಇರದ ಕಂಪೆನಿಯ ಪಾಲಾಗಿತ್ತು 10,000 ವೆಂಟಿಲೇಟರ್ ತಯಾರಿಯ ಆರ್ಡರ್

Update: 2020-09-24 11:52 GMT

ಹೊಸದಿಲ್ಲಿ : ಚೆನ್ನೈ ಮೂಲದ 23 ವರ್ಷ ಹಳೆಯ ಕಂಪೆನಿ ಟ್ರಿವಿಟ್ರೊನ್ ಹೆಲ್ತ್ ಕೇರ್‍ ಗೆ ಎಪ್ರಿಲ್ ತಿಂಗಳಲ್ಲಿ  7,000 ಬೇಸಿಕ್ ಹಾಗೂ 3,000 ಅಡ್ವಾನ್ಸ್ಡ್  ವೆಂಟಿಲೇಟರ್‍ ಗಳ ತಯಾರಿಕೆಗೆ ಸರಕಾರದಿಂದ ಆರ್ಡರ್ ದೊರಕಿತ್ತು. ಆದರೆ ಈ ಆರ್ಡರ್ ಪಡೆದಿದ್ದ ಸಂದರ್ಭದಲ್ಲಿ ಕಂಪೆನಿಯ ಬಳಿ ಬೇಸಿಕ್ ಅಥವಾ ಅಡ್ವಾನ್ಸ್ಡ್ ವೆಂಟಿಲೇಟರ್ ಮಾದರಿಗಳೂ ಇರಲಿಲ್ಲ ಅಥವಾ ಸಿದ್ಧವಾಗಿರುವ ವೆಂಟಿಲೇಟರ್‍ ಗಳೂ ಇರಲಿಲ್ಲ.

ಟ್ರಿವಿಟ್ರಾನ್ ಪಡೆದ ಒಟ್ಟು ಆರ್ಡರ್ ಮೊತ್ತ ಜಿಎಸ್‍ಟಿ ಸಹಿತ ರೂ. 373 ಕೋಟಿಯಾಗಿತ್ತು. ಬೇಸಿಕ್ ವೆಂಟಿಲೇಟರ್ ಬೆಲೆ ರೂ 1,66,376 ಆಗಿದ್ದರೆ ಅಡ್ವಾನ್ಸ್ಡ್ ವೆಂಟಿಲೇಟರ್ ಬೆಲೆ ರೂ 8,56,800 ಆಗಿತ್ತೆಂದು  ಆರ್‍ ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಪಡೆದ ಆರ್‍ ಟಿಐ ಮಾಹಿತಿಯಿಂದ ತಿಳಿದು ಬಂದಿತ್ತು.

ವೆಂಟಿಲೇಟರ್ಗಾಗಿ ಟೆಂಡರ್ ಅನ್ನು ಸರಕಾರಕ್ಕೆ ಕೋವಿಡ್ ಸಂಬಂಧಿಸಿದ ಉಪಕರಣ  ತರಿಸುವ ಜವಾಬ್ದಾರಿ  ವಹಿಸಲಾದ ಸಾರ್ವಜನಿಕ ರಂಗದ ಸಂಸ್ಥೆ  ಎಚ್‍ಎಲ್‍ಎಲ್ ಲೈಫ್ ಕೇರ್ ಲಿಮಿಟೆಡ್ ವತಿಯಿಂದ ಕರೆಯಲಾಗಿತ್ತು. ಆದರೆ ಟ್ವಿವಿಟ್ರಾನ್ ಸಂಸ್ಥೆಗೆ ಆರ್ಡರ್ ದೊರಕಿದ್ದು ಎಚ್‍ಎಲ್‍ಎಲ್ ಸಂಸ್ಥೆಯಿಂದಲ್ಲ ಬದಲು ಆಂಧ್ರ ಪ್ರದೇಶ ಮೆಡ್‍ಟೆಕ್ ಝೋನ್ ಎಂಬ ಆಂಧ್ರ ಸರಕಾರದ ಸ್ವಾಮ್ಯದ ಸಂಸ್ಥೆಯಿಂದಾಗಿತ್ತು.

13,500 ವೆಂಟಿಲೇಟರ್ ತಯಾರಿಸುವ ಟೆಂಡರ್ ಅನ್ನು  ಈ ಮೆಡ್ ಟೆಕ್ ಕಂಪೆನಿಗೆ ಎಚ್‍ಎಲ್‍ಎಲ್ ವಹಿಸಿದ್ದರೆ  ಮೆಡ್ ಟೆಕ್ 10,000 ವೆಂಟಿಲೇಟರ್ಗ ಳ ಆರ್ಡರ್ ಅನ್ನು ಟ್ರಿವಿಟ್ರಾನ್‍ಗೆ ವಹಿಸಿತ್ತು.

ಇದೀಗ ಐದು ತಿಂಗಳ ನಂತರ ಟ್ರಿವಿಟ್ರಾನ್ ಹೇಳುವಂತೆ ಕಂಪೆನಿ ವೆಂಟಿಲೇಟರ್ ಗಳನ್ನು ಬಹಳ ವೆಚ್ಚ  ಮಾಡಿ ಹಾಗೂ ಬಹಳಷ್ಟು ಶ್ರಮವಹಿಸಿ ಸಿದ್ಧಪಡಿಸಿದ್ದರೂ ಡಿಸ್ಪ್ಯಾಚ್ ಆರ್ಡರ್ ಅನ್ನು ಇನ್ನೂ ಎಚ್‍ಎಲ್‍ಎಲ್ ನೀಡಿಲ್ಲ. ಇದೇ ಕಾರಣದಿಂದ ಕಂಪೆನಿ ಯಾವುದೇ ವೆಂಟಿಲೇಟರ್ ಅನ್ನು ಪೂರೈಕೆ ಕೂಡ ಮಾಡಿಲ್ಲ.

ಈ ಹಿಂದೆ ವೆಂಟಿಲೇಟರ್ ತಯಾರಿಸದೆ ಇದ್ದ ಕಂಪೆನಿಗೆ  ವೆಂಟಿಲೇಟರ್ ತಯಾರಿಸುವ ಹೊಣೆ ವಹಿಸಿರುವ ಹಾಗೂ ಈ ಎರಡು ಹಂತದ ಪಾರದರ್ಶಕತೆಯಿಲ್ಲದ ಕಾಂಟ್ರಾಕ್ಟ್ ವ್ಯವಸ್ಥೆ ಹಾಗೂ ಪಿಎಂ ಕೇರ್ಸ್ ಫಂಡ್‍ನ ಸುಮಾರು ರೂ 2,000 ಕೋಟಿ ಬಳಸಿ  58,850 ವೆಂಟಿಲೇಟರ್‍ ಗಳನ್ನು ತರಿಸುವ ಮೋದಿ ಸರಕಾರದ ಕ್ರಮವೇ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

30,000   ವೆಂಟಿಲೇಟರ್‍ ಗಳನ್ನು  ತಯಾರಿಸುವ ಕೆಲಸವನ್ನು ನೇರವಾಗಿ ಭಾರತ್ ಇಲೆಕ್ಟ್ರಾನಿಕ್ಸ್ ಗೆ ನೀಡಲಾಗಿದ್ದರೆ ಉಳಿದ ವೆಂಟಿಲೇಟರ್ ತರಿಸುವ ಜವಾಬ್ದಾರಿಯನ್ನು ಎಚ್‍ಎಲ್‍ಎಲ್ ಗೆ ವಹಿಸಲಾಗಿತ್ತು.

ಎಚ್‍ಎಲ್‍ಎಲ್‍ನ ಟೆಂಡರ್ ಆಹ್ವಾನ ದಿನದಿಂದಲೇ ಸಮಸ್ಯೆಗಳು ಆರಂಭಗೊಂಡಿದ್ದವು. ಯಾವ ಪ್ರಕ್ರಿಯೆಯಲ್ಲೂ ಪಾರದರ್ಶಕತೆಯಿರಲಿಲ್ಲ ದರದ ಕುರಿತೂ ಗೊಂದಲಗಳಿದ್ದವು ಎಂದು ಹೇಳಲಾಗಿದೆ. ಸೆಪ್ಟೆಂಬರ್ 7ರ ತನಕ  ಎಚ್‍ಎಲ್‍ಎಲ್ ಆರ್ಡರ್ ಮಾಡಿದ್ದ  28,963 ವೆಂಟಿಲೇಟರ್ಗಳ ಪೈಕಿ ಶೇ 18ರಷ್ಟು ಮಾತ್ರ ಪೂರೈಕೆ ಮಾಡಲಾಗಿದೆ. ಇದಕ್ಕೆ ಕಾರಣ ಎಚ್‍ಎಲ್‍ಎಲ್ ಇನ್ನೂ ಡಿಸ್ಪ್ಯಾಚ್ ಆರ್ಡರ್ ನೀಡಿಲ್ಲದೇ ಇರುವುದು ಎಂದು ಟೆಂಡರ್ ಪಡೆದ ಕಂಪೆನಿಗಳು ಹೇಳಿಕೊಂಡಿವೆ.

10,000 ವೆಂಟಿಲೇಟರ್ ತಯಾರಿಕೆಗೆ  ಗುತ್ತಿಗೆ ಪಡೆದಿದ್ದ ವಿವಾದಾತ್ಮಕ ಸ್ಟಾರ್ಟ್-ಅಪ್ ಸಂಸ್ಥೆ ಎಗ್‍ವಾ ಇಲ್ಲಿಯ ತನಕ ಅರ್ಧದಷ್ಟು ವೆಂಟಿಲೇಟರ್ಗಳನ್ನು ಮಾತ್ರ ಪೂರೈಸಿದೆ.

ಆದರೆ ಸೆಪ್ಟೆಂಬರ್ 7ರ ತನಕ ಭಾರತ್ ಇಲೆಕ್ಟ್ರಾನಿಕ್ಸ್  ಲಿಮಿಟೆಡ್ ತನಗೆ ವಹಿಸಲಾಗಿದ್ದ 30,000 ವೆಂಟಿಲೇಟರ್ ನಿರ್ಮಾಣ ಪೈಕಿ 24,332 ಅಥವಾ ಶೇ 80ರಷ್ಟು ವೆಂಟಿಲೇಟರ್ ಗಳನ್ನು ಪೂರೈಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News