ಲೋಕಸಭೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚೆ: ಸರ್ಕಾರದ ಗಮನ ಸೆಳೆದ ಸಂಸದ ಪ್ರತಾಪ್ ಸಿಂಹ

Update: 2020-09-24 12:52 GMT

ಮಡಿಕೇರಿ, ಸೆ.24: ಕಾಫಿ ಬೆಳೆಗಾರರ ಸಾಲದ ಮೇಲಿನ ಎಲ್ಲಾ ರೀತಿಯ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಸರಕಾರದ ಗಮನ ಸೆಳೆದಿದ್ದಾರೆ.

ಲೋಕಸಭೆಯಲ್ಲಿ ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಗಮನ ಸೆಳೆಯುವಂತೆ ಮಾತನಾಡಿದ ಅವರು ಕೊಡಗಿನ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸಭೆಗೆ ಮನವರಿಕೆ ಮಾಡಿದರು.

ದೇಶದ ಒಟ್ಟು ಕಾಫಿ ಉತ್ಪಾದನೆ ಪೈಕಿ ಶೇಕಡಾ 70ರಷ್ಟು ಕಾಫಿ ಕರ್ನಾಟಕದಿಂದಲೇ ಉತ್ಪಾದನೆಯಾಗುತ್ತಿದೆ.ಈ ಪೈಕಿ ಶೇಕಡಾ 98ರಷ್ಟು ಕಾಫಿ ಬೆಳೆಗಾರರು ಸಣ್ಣ ಮತ್ತು ಮಧ್ಯಮ ವರ್ಗದವರಿದ್ದಾರೆ. 2016 ಮತ್ತು 2017ರಲ್ಲಿ ಅನಾವೃಷ್ಟಿಯಿಂದ ತತ್ತರಿಸಿದ್ದ ಕೊಡಗಿನ ಕಾಫಿ ಬೆಳೆಗಾರರು, 2018 ರಿಂದೀಚೆಗೆ ಸತತ ಮೂರು ವರ್ಷ ಮಹಾಮಳೆ, ಪ್ರವಾಹ, ಭೂ ಕುಸಿತದಿಂದಾಗಿ ತಮ್ಮ ಎಲ್ಲಾ ಕಾಫಿ, ಕರಿಮೆಣಸು ಬೆಳೆಯನ್ನು ಕಳೆದುಕೊಂಡು ತೀವ್ರ ಕಷ್ಟದಲ್ಲಿದ್ದಾರೆ. ಮಣ್ಣು ಕುಸಿತ ಪರಿಣಾಮ ಕಾಫಿ ನಾಟಿಯೂ ಸಾಧ್ಯವಾಗುತ್ತಿಲ್ಲ ಎಂದು ಅವರು ವಿವರಿಸಿದರು.

ಕಾಫಿ ಬೆಳಗಾರರಿಗೆ ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ ನೀಡಲಾಗುತ್ತಿರುವ ಪರಿಹಾರ ಅತ್ಯಲ್ಪವಾಗಿದೆ. ವಿತ್ತ ಖಾತೆ ಸಚಿವರಾದ ನಿರ್ಮಲ ಸೀತಾರಾಮ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಕೇಂದ್ರ ವಾಣಿಜ್ಯ ಸಚಿವ ಪಿಯುಷ್ ಗೊಯಲ್ ಕರ್ನಾಟಕ ಬಿಜೆಪಿಯ ಉಸ್ತುವಾರಿಯಾಗಿದ್ದಾರೆ. ಈ ಇಬ್ಬರೂ ಸಚಿವರು ಕೂಡಲೇ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದು ಪ್ರತಾಪ್ ಸಿಂಹ ಸದನದಲ್ಲಿ ಮನವಿ ಮಾಡಿದರು.

ತನ್ನ ಕ್ಷೇತ್ರವಾದ ಕೊಡಗು ಜಿಲ್ಲೆಯ 3000 ಎಕರೆ ಕಾಫಿ ಕೃಷಿ ಭೂಮಿ ಸಂಪೂರ್ಣ ಹಾನಿಗೊಳಗಾಗಿರುವುದಾಗಿ ತಿಳಿಸಿದ ಅವರು, ಕನಿಷ್ಠ ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿಯನ್ನಾದರೂ ಸರಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News