ಹಿಂದುಳಿದ ವರ್ಗಗಳ ಧ್ವನಿ ಬಿ.ನಾರಾಯಣ ರಾವ್: ಅರಸು ಪ್ರಭಾವಕ್ಕೆ ಒಳಗಾಗಿದ್ದ ಸರಳ-ಸಜ್ಜನ ವ್ಯಕ್ತಿ

Update: 2020-09-24 18:23 GMT

ಬೆಂಗಳೂರು, ಸೆ. 24: ಗ್ರಾಮೀಣ ಪ್ರದೇಶದ ಬಡ-ಹಿಂದುಳಿದ ರೈತ, ಕೂಲಿ- ಕಾರ್ಮಿಕರ ಮಕ್ಕಳಿಗೆ ಸರಕಾರದ ಸೌಲಭ್ಯಗಳು ದಕ್ಕಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕು ಎಂದು ಮಹೋನ್ನತ ಉದ್ದೇಶಕ್ಕಾಗಿ ತಮ್ಮ ಜೀವನದಲ್ಲಿ ಅವಿರತ ಹೋರಾಟ ನಡೆಸಿದ್ದ, ಅತ್ಯಂತ ತುಳಿತಕ್ಕೆ ಒಳಗಾಗಿರುವ ಶೋಷಿತ, ಕಬ್ಬಲಿಗ(ಕೋಲಿ) ಸಮುದಾಯದ ಬಿ.ನಾರಾಯಣ ರಾವ್ ಅವರು ಜನಪ್ರತಿನಿಧಿಯಾಗಿ ಶಾಸಕ ಸ್ಥಾನಕ್ಕೇರಿದ್ದೆ ಒಂದು ರೋಚಕ.

ದಲಿತ, ಹಿಂದುಳಿದ ಹೋರಾಟಗಳು ಮತ್ತು ಪ್ರಗತಿಪರ ವಿಚಾರಧಾರೆಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದ ಬಿ.ನಾರಾಯಣರಾವ್ ಅವರು, ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಸೈಕಲ್ ಜಾಥಾ ಸೇರಿದಂತೆ ಹತ್ತು ಹಲವು ಹೋರಾಟಗಳ ಮೂಲಕ ಜಿಲ್ಲೆಯಲ್ಲಿ ಗಮನ ಸೆಳೆದಿದ್ದು, ಬೀದರ್ ಜಿಲ್ಲೆಯಲ್ಲಿ ನಾರಾಯಣ ರಾವ್ ಎಂದರೆ ‘ಹೋರಾಟಗಾರ ಬಿ. ನಾರಾಯಣ ರಾವ್’ ಎಂದೇ ಜನಜನಿತವಾಗಿದೆ.

1955ರಲ್ಲಿ ಬೀದರ್ ಜಿಲ್ಲೆಯ ಅದೇ ತಾಲೂಕಿನ ಬಸವನಪುರ ಗ್ರಾಮದಲ್ಲಿ ಜನಿಸಿದ ಬಿ.ನಾರಾಯಣರಾವ್ ಅವರು ಕಬ್ಬಲಿಗ (ಕೋಲಿ) ಸಮುದಾಯಕ್ಕೆ ಸೇರಿದವರು. ಹಿಂದುಳಿದ ವರ್ಗಗಳಲ್ಲಿ ಈ ಸಮುದಾಯವನ್ನು ಗುರುತಿಸಲಾಗಿದ್ದರೂ, ಈ ಸಮಾಜ ಇಂದಿಗೂ ಬುಡಕಟ್ಟು ಸಮುದಾಯದ ಲಕ್ಷಣಗಳಲ್ಲೇ ಇದೆ. ಜಾತಿಯ ಅಪಮಾನಗಳನ್ನು ಹಾಸಿ-ಉಂಡು ಸ್ವಗ್ರಾಮದಲ್ಲೆ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನಾರಾಯಣ ರಾವ್, ಬೀದರ್‌ನಲ್ಲಿ ಕಾಲೇಜು ದಿನಗಳಲ್ಲೆ ಅಸಮಾನತೆಯ ವಿರುದ್ಧ ಮತ್ತು ವ್ಯವಸ್ಥೆಯಲ್ಲಿ ಲೋಪಗಳ ವಿರುದ್ಧ ಸಿಡಿದೇಳುವ ಮನೋಸ್ಥೈರ್ಯವನ್ನು ರೂಢಿಸಿಕೊಂಡ ಅಪರೂಪದ ವ್ಯಕ್ತಿ.

ಈ ಮಧ್ಯೆ ಸಹಜವಾಗಿಯೇ ರಾಜಕಾರಣಕ್ಕೂ ಧುಮುಕಿದ ನಾರಾಯಣ ರಾವ್ ಅವರು, 1988ರಲ್ಲಿ ‘ಜನತಾ ಪಕ್ಷ’ದಿಂದ ಜಿಲ್ಲೆಯ ಮಾಳೇಗಾಂವ್ ಮತಕ್ಷೇತ್ರದಿಂದ ಮೊಟ್ಟ ಮೊದಲ ಬಾರಿಗೆ ಜಿಪಂ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದರು. ಅಲ್ಲದೆ, ಯೋಜನಾ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬೀದರ್ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಒಮ್ಮೆ ಪರಾಭವಗೊಂಡಿದ್ದರು.

ಎಸ್‌ಎಂ ಕೃಷ್ಣ ಆಡಳಿತಾವಧಿಯಲ್ಲಿ ಸಾಕ್ಷರತಾ ಮಿಷನ್ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಗ್ರಾಮೀಣ ಪ್ರದೇಶದ ಜನರಿಗೆ ಅಕ್ಷರದ ಅರಿವು ಮೂಡಿಸಿಲು ಶ್ರಮಿಸಿದ್ದ ನಾರಾಯಣ ರಾವ್, ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾಗಿಯೂ ವಿವಿಧ ಹುದ್ದೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಬಳಿಕ ಬೀದರ್ ಜಿಲ್ಲೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಸೋಲು ಕಂಡಿದ್ದ ನಾರಾಯಣ ರಾವ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು.

2019ರಲ್ಲಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಜನಾನುರಾಗಿ, ಧೀಮಂತ ನಾಯಕ ಡಿ.ದೇವರಾಜ ಅರಸು ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಟ್ಟ ಪ್ರಭಾವಕ್ಕೆ ಒಳಗಾಗಿದ್ದ ನಾರಾಯಣ ರಾವ್ ಅವರು ಅತ್ಯಂತ ಸರಳ, ಸಜ್ಜ ನಿಕೆಗೆ ಹೆಸರಾಗಿದ್ದರು. ಎಷ್ಟೇ ಎತ್ತರಕ್ಕೆ ಏರಿದರೂ ಎಲ್ಲರೊಂದಿಗೆ ಬೆರೆಯುವ ಅವರಲ್ಲಿದ್ದ ವಿಶೇಷ ಗುಣ ಎಲ್ಲರಿಗೂ ಮಾದರಿಯಾಗಿತ್ತು.

ಅಲೆಮಾರಿ ಸಮುದಾಯಕ್ಕೆ ವಸತಿ ಶಾಲೆ, ವೃದ್ಧಾಶ್ರಮ

ಕಾಲೇಜು ಹಂತದಲ್ಲೇ ವಿದ್ಯಾರ್ಥಿ ಸಂಘಟನೆ ಹುಟ್ಟುಹಾಕಿ, ಹಿಂದುಳಿದ ವರ್ಗಗಳಿಂದ ಬಡ ವಿದ್ಯಾರ್ಥಿಗಳ ಪರವಾಗಿ ಹೋರಾಟಕ್ಕಿಳಿಯುವ ಮೂಲಕ ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮಿದರು. ಆ ಬಳಿಕ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಜೊತೆ ಜೊತೆಗೆ 1987ರಲ್ಲಿ ಬೀದರ್‌ನಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲದೆ, 1992ರಲ್ಲಿ ದೇವರಾಜ ಅರಸು ಶೈಕ್ಷಣಿಕ ದತ್ತಿ ಸಂಸ್ಥೆ ಸ್ಥಾಪಿಸಿ ಅಲೆಮಾರಿ ಸಮುದಾಯಕ್ಕೆ ವಸತಿಶಾಲೆ ಮತ್ತು ವೃದ್ಧಾಶ್ರಮ ಆರಂಭಿಸಿದ್ದು, ಇವರ ಹೆಗ್ಗಳಿಕೆಯಾಗಿದೆ.

ಮೊದಲ ಸಲ ಶಾಸಕರಾಗಿ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದ ಶಾಸಕ ಬಿ.ನಾರಾಯಣ ರಾವ್ ನಡು ಹಾದಿಯಲ್ಲೆ ಬಾಳಪಯಣ ಕೊನೆಗೊಳಿಸಿ ನಮ್ಮನ್ನು ಶೋಕದಲ್ಲಿ ಮುಳುಗಿಸಿದ್ದಾರೆ. ವೈಯಕ್ತಿಕವಾಗಿ ನನಗೆ ಆತ್ಮೀಯರಾಗಿದ್ದ ನಾರಾಯಣ ರಾವ್, ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ ಸಾಮಾಜಿಕ ಬದ್ಧತೆಯ ನಾಯಕ. ಹೀಗಾಗಬಾರದಿತ್ತು, ನನ್ನ ಸಂತಾಪಗಳು.
-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News