ದೇಶದಲ್ಲಿ 58 ಲಕ್ಷ ದಾಟಿದ ಕೊರೋನ ಪ್ರಕರಣ

Update: 2020-09-25 03:35 GMT

ಹೊಸದಿಲ್ಲಿ, ಸೆ.25: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86,508 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 58 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಮಖ್ಯೆ 9,66,382ಕ್ಕೆ ಇಳಿದಿದ್ದು, ಒಟ್ಟು 46,74,988 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೋನ ವೈರಸ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 91,149ಕ್ಕೇರಿದೆ.

ಗುರುವಾರ ದೇಶದಲ್ಲಿ 1141 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸತತ ಎರಡನೇ ದಿನ ಸಾವಿನ ಸಂಖ್ಯೆ 1,100ಕ್ಕಿಂತ ಅಧಿಕ ದಾಖಲಾಗಿದೆ.
ಈ ಮಧ್ಯೆ ದೇಶದಲ್ಲಿ ತಪಾಸಣೆ ಸಂಖ್ಯೆ ಕಡಿಮೆಗೊಳಿಸಿರುವ ಹಿನ್ನೆಲೆಯಲ್ಲಿ ಒಟ್ಟು ಪರೀಕ್ಷೆಗಳಿಗೆ ಹೋಲಿಸಿದರೆ ಪಾಸಿಟಿವ್ ಪ್ರಕರಣಗಳ ದರ ಹೆಚ್ಚಿದೆ. ಈ ವಾರದ ಮೊದಲ ಮೂರು ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣ ಶೇಕಡ 9.3ರಷ್ಟಿದ್ದು, ಹಿಂದಿನ ಎರಡು ವಾರಗಳ ಕಾಲ ಇದು 8.7% ಇತ್ತು. ಇದು ದೇಶದಲ್ಲಿ ತಪಾಸಣೆ ಹೆಚ್ಚಿಸುವ ಅಗತ್ಯವನ್ನು ಎತ್ತಿ ತೋರಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 17-23ರ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಪ್ರಗತಿ ದರ 0.6 ಶೇಕಡದಷ್ಟು ಕಡಿಮೆಯಾಗಿದೆ.

ಹರ್ಯಾಣದಲ್ಲಿ ಗುರುವಾರ 1,698 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,18,554ಕ್ಕೇರಿದೆ. ಅಸ್ಸಾಂನಲ್ಲಿ ಗುರುವಾರ 28,993 ಮಂದಿಯ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 2,091 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,65,582ಕ್ಕೇರಿದೆ. ಅಸ್ಸಾಂನಲ್ಲಿ ಇದುವರೆಗೆ 4,568 ಮಂದಿ ಪೊಲೀಸರಿಗೆ ಸೋಂಕು ತಗುಲಿದ್ದು, 4,367 ಮಂದಿ ಗುಣಮುಖರಾಗಿದ್ದಾರೆ. 3,549 ಮಂದಿ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದಾರೆ ಎಂದು ಹೆಚ್ಚುವರಿ ಡಿಜಿಪಿ ಜಿ.ಪಿ.ಸಿಂಗ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News