ಮೈಸೂರು: ರೈತ-ದಲಿತ -ಕಾರ್ಮಿಕ ಸಂಘಟನೆಗಳಿಂದ ಹೆದ್ದಾರಿ ತಡೆ

Update: 2020-09-25 12:36 GMT

ಮೈಸೂರು,ಸೆ.25: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ- ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ವತಿಯಿಂದ  ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಲಾಯಿತು.

ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆ ಬಳಿ  ಶುಕ್ರವಾರ ಜಮಾವಣೆಗೊಂಡ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ  ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಿಂಗ್ ರಸ್ತೆಯ ನಾಲ್ಕು ಬಳಿಯಲ್ಲೂ ಅಡ್ಡಲಾಗಿ ಕುಳಿತ ರೈತರು ವಾಹನಗಳ ಓಡಾಟವನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಡಿಸಿದರು. ಇದೇ ವೇಳೆ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜವಾದಿ ಪ.ಮಲ್ಲೇಶ್, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಮರಣ ಶಾಸನ ಬರೆಯಲಾಗುತ್ತಿದೆ. ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ರೈತರು ಅಹಿಂಸಾತ್ಮಕ ಪ್ರತಿಭಟನೆ ನಡೆಸುತಿದ್ದರೂ ರಾಜ್ಯ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ, ನಮ್ಮ ಅಹಿಂಸಾತ್ಮಕ ಹೋರಾಟವನ್ನು ನಮ್ಮ ದೌರ್ಬಲ್ಯ ಎಂದು ಸರ್ಕಾರ ಭಾವಿಸಿರಬಹುದು. ಆದರೆ ನಾವು ಅಂಬೇಡ್ಕರ್ ಮತ್ತು ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ನಮ್ಮ ತಾಳ್ಮೆಯನ್ನು ಕೆಣಕಿದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಮ್ಮ ಗುರಿ ತಲುಪುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ, ಈಗಾಗಲೇ ದೇಶಾದ್ಯಂತ  ರೈತರು ಸಿಡಿದೆದ್ದಿದ್ದು ನಮ್ಮ ಹೋರಾಟವನ್ನು ಯಾವ ಶಕ್ತಿಗಳು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ರೈತ ವಿರೋಧಿ ನೀತಿ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು. ಸುಮಾರು ಅರ್ಧಗಂಟೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ರೈತರನ್ನು ಕುರಿತು ಡಿಸಿಪಿ ಪ್ರಕಾಶ್ ಗೌಡ ಇಲ್ಲಿಂದ ತೆರಳುವಂತೆ ಮನವಿಮಾಡಲು ಮುಂದಾದರು ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಪೊಲೀಸರು ಎರಡು ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ರೈತರನ್ನು  ಬಂಧಿಸಿದರು, ಇದೇ ವೇಳೆ ರೈತರು ಪೊಲೀಸರ ನಡೆಗೆ ಧಿಕ್ಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧಿಕ್ಕಾರ ಎಂದು ಕೂಗಿದರು.

ಬಂಧನಕ್ಕೊಳಗಾದ ರೈತರನ್ನು ಜಿ.ಆರ್.ಎಸ್ ಫ್ಯಾಂಟಸಿ ಪಾರ್ಕ್ ಬಳಿಯ ಖಾಲಿ ಜಾಗಕ್ಕೆ ಕರೆದೊಯ್ಯಲಾಗಿತ್ತು. ಸುಮಾರು ಒಂದು ಗಂಟೆಗಳ ನಂತರ ಎಲ್ಲರನ್ನು ಬಿಡುಗಡೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ಅಭಿರುಚಿ ಗಣೇಶ್, ವಕೀಲ ಪುನೀತ್, ದಲಿತ ಸಂಘರ್ಷ ಸಮಿತಿಯ ಶಂಭುಲಿಂಗಸ್ವಾಮಿ, ಕಲ್ಲಹಳ್ಳಿ ಕುಮಾರ್, ಪರಿಸರವಾದಿ ಭಾನುಮೋಹನ್, ಚಂದ್ರಶೇಖರ್, ಮಾರನಾಯ್ಕ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News