ಮೂರು ಹಂತದಲ್ಲಿ ಬಿಹಾರ ವಿಧಾನಸಭಾ ಚುನಾವಣೆ: ಅಕ್ಟೋಬರ್ 28, ನ.3,7 ರಂದು ಚುನಾವಣೆ

Update: 2020-09-25 16:09 GMT

ಹೊಸದಿಲ್ಲಿ, ಸೆ. 25: ಬಿಹಾರ ವಿಧಾನ ಸಭೆ ಚುನಾವಣೆ ಮೂರು ಹಂತದಲ್ಲಿ ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. 243 ಸ್ಥಾನಕ್ಕೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಶುಕ್ರವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಈಗಾಗಲೇ ಸಕಲ ವ್ಯವಸ್ಥೆಗಳನ್ನು ಮಾಡಿದೆ.

ಚುನಾವಣೆ ದಿನಾಂಕಗಳನ್ನು ಪ್ರಕಟಿಸಿರುವ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಕ್ಟೋಬರ್ 1ರಂದು ಆರಂಭವಾಗಲಿದೆ ಹಾಗೂ ಅಕ್ಟೋಬರ್ 8ರಂದು ಅಂತ್ಯಗೊಳ್ಳಲಿದೆ. ಅಕ್ಟೋಬರ್ 9ರ ಒಳಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮತದಾನ ಅಕ್ಟೋಬರ್ 28ರಂದು ನಡೆಯಲಿದೆ. ನಾಮಪತ್ರ ಹಿಂದೆ ತೆಗೆಯಲು ಕೊನೆಯ ದಿನಾಂಕ ಅಕ್ಟೋಬರ್ 12. ಮತದಾನ ಅಕ್ಟೋಬರ್ 28ರಂದು ನಡೆಯಲಿದೆ. ಈ ಹಂತದಲ್ಲಿ 16 ಜಿಲ್ಲೆಗಳ 71 ವಿಧಾನ ಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ನಾಮಪತ್ರ ಸಲ್ಲಿಕೆ ಅಕ್ಟೋಬರ್ 9ರಂದು ಆರಂಭವಾಗಲಿದೆ. ಅಕ್ಟೋಬರ್ 16ರಂದು ಅಂತ್ಯಗೊಳ್ಳಲಿದೆ. ಅಕ್ಟೋಬರ್ 17ರ ಒಳಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂದೆ ತೆಗೆಯಲು ಕೊನೆಯ ದಿನಾಂಕ ಅಕ್ಟೋಬರ್ 19. ನವೆಂಬರ್ 3ರಂದು ಮತದಾನ ನಡೆಯಲಿದೆ. ಈ ಹಂತದಲ್ಲಿ 17 ಜಿಲ್ಲೆಗಳ 94 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೂರನೇ ಹಂತದಲ್ಲಿ ನಾಮಪತ್ರ ಸಲ್ಲಿಕೆ ಅಕ್ಟೋಬರ್ 13ರಂದು ಆರಂಭವಾಗಲಿದೆ. ಅಕ್ಟೋಬರ್ 20ರಂದು ಅಂತ್ಯಗೊಳ್ಳಲಿದೆ. ಅಕ್ಟೋಬರ್ 21ರ ಒಳಗೆ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 23ರ ಒಳಗೆ ನಾಮಪತ್ರ ಹಿಂದೆ ತೆಗೆಯಬಹುದು. ನವೆಂಬರ್ 7ರಂದು ಮತದಾನ ನಡೆಯಲಿದೆ. ಈ ಹಂತದಲ್ಲಿ 15 ಜಿಲ್ಲೆಗಳ 78 ಸ್ಥಾನಗಳಿಗೆ ಮತದಾನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಬದಲಾಗಿ 7 ಗಂಟೆ ವರೆಗೆ ನಡೆಯಲಿದೆ.

ಮತದಾರರು ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ಬಳಸಬೇಕು. ಕೊರೋನ ಸೋಂಕಿತರಿಗೆ ದಿನದ ಕೊನೆಯ ಗಂಟೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗುವುದು ಎಂದು ಅರೋರಾ ಹೇಳಿದರು. ‘‘ಚುನಾವಣೆ ಸಂದರ್ಭ ಕೋಮು ಉದ್ವಿಗ್ನತೆ ಸೃಷ್ಟಿಸುವಂತಹ ಉದ್ದೇಶಗಳಿಗೆ ಯಾರಾದರೂ ಸಾಮಾಜಿಕ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಂಡರೆ ಪರಿಣಾಮ ಎದುರಿಸಬೇಕಾದೀತು. ದ್ವೇಷ ಭಾಷಣವನ್ನು ಕಟುವಾಗಿ ನಿಗ್ರಹಿಸಲಾಗುವುದು’’ ಎಂದು ಅರೋರಾ ತಿಳಿಸಿದ್ದಾರೆ. ಚುನಾವಣಾ ಆಯೋಗ ಚುನಾವಣೆಗಾಗಿ 7 ಲಕ್ಷ ಹ್ಯಾಂಡ್ ಸ್ಯಾನಿಟೈಸರ್, 46 ಲಕ್ಷ ಮಾಸ್ಕ್, 6 ಲಕ್ಷ ಪಿಪಿಇ ಕಿಟ್, 6.7 ಲಕ್ಷ ಫೇಸ್ ಶೀಲ್ಡ್, 23 ಜೋಡಿ ಕೈಗವಸುಗಳ ವ್ಯವಸ್ಥೆ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News