ಕ್ಲಸ್ಟರ್ ವಿವಿ ರಚನೆಗೆ ಪ್ರಸ್ತಾವನೆ: ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕಕ್ಕೆ ತಡೆ

Update: 2020-09-25 16:41 GMT

ಬೆಂಗಳೂರು, ಸೆ.25: ಕ್ಲಸ್ಟರ್ ವಿವಿಗಳಿಗೆ ಕೇಂದ್ರ ಸರಕಾರ ಒಂದು ಅವಧಿಗೆ ಅನ್ವಯಿಸುವಂತೆ 50 ಕೋಟಿ ರೂ.ಗಳ ನೆರವು ನೀಡುತ್ತದೆ ಎಂದು ಕ್ಲಸ್ಟರ್ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲು ಮುಂದಾಗುವುದು ಸರಿಯಲ್ಲ. ಇದರಿಂದ, ಅನಗತ್ಯವಾಗಿ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ ಎಂದು ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ಆಗ್ರಹಕ್ಕೆ ಮಣಿದು 2020ನೆ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ತಡೆಹಿಡಿಯಲಾಯಿತು.

ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜು ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಹಾಗೂ ಮಂಡ್ಯ ಸರಕಾರಿ ಕಾಲೇಜನ್ನು ಕ್ಲಸ್ಟರ್ ವಿಶ್ವವಿದ್ಯಾಲಯ ಮಾಡಬೇಕೆಂಬ ಉದ್ದೇಶದಿಂದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಧೇಯಕವನ್ನು ಗುರುವಾರ ಮಂಡನೆ ಮಾಡಿದರು.

ಈ ಮೂರು ಕ್ಲಸ್ಟರ್ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳು ಹಾಗೂ ವಿಶೇಷಾಧಿಕಾರಿಗಳನ್ನು ನೇಮಕ ಮಾಡಬಹುದಾಗಿದೆ. ಅಲ್ಲದೆ, ಕ್ಲಸ್ಟರ್ ವಿವಿಗಳನ್ನು ಮಾಡುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಇಂತಹ ವಿಶ್ವವಿದ್ಯಾಲಯಗಳ ಅಗತ್ಯವಿದೆ ಎಂದು ಅವರು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯುಜಿಸಿ 50 ಕೋಟಿ ರೂ.ಕೊಡುವುದು ಬೇಡ, ನಾವು ಮುಂದಿನ ದಿನಗಳಲ್ಲಿ ಅನುಭವಿಸುವುದು ಬೇಡ. ಹೊಸ ವಿಶ್ವವಿದ್ಯಾಲಯಗಳ ಆರಂಭದಿಂದ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚುವುದಿಲ್ಲ. ಈಗಿರುವ ವಿವಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ, ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನ ಮಾಡಿ ಎಂದರು.

ಕ್ಲಸ್ಟರ್ ವಿವಿಗಳ ರಚನೆಯಿಂದಾಗಿ ಅದಕ್ಕೊಬ್ಬರು ಉಪ ಕುಲಪತಿ, ಕುಲಸಚಿವರು, ಪ್ರೊಫೆಸರ್‍ಗಳು, ಸಿಬ್ಬಂದಿಗಳು, ನೂರಾರು ಎಕರೆ ಭೂಮಿ ಎಲ್ಲವನ್ನು ನೀಡಬೇಕಾಗುತ್ತದೆ. ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.

ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ ಮಾತನಾಡಿ,  ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜನೆ ಮಾಡಿದ ನಂತರ ಅಸ್ತಿತ್ವಕ್ಕೆ ಬಂದಂತಹ ಎರಡು ಹೊಸ ವಿವಿಗಳಿಗೆ ಈವರೆಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. 50 ಕೋಟಿ ರೂ.ಸಿಗುತ್ತದೆ ಎಂದು ಕಾಲೇಜುಗಳನ್ನು ವಿವಿಗಳಾಗಿ ಪರಿವರ್ತಿಸಿದರೆ ಗುಣಮಟ್ಟದ ಸುಧಾರಣೆಯಾಗುವುದಿಲ್ಲ. ಈ ವಿಧೇಯಕವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಮಾತನಾಡಿ, ಈಗಿರುವ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕೊಡದೆ, ವಿವಿಗಳನ್ನಾಗಿ ಪರಿವರ್ತನೆ ಮಾಡಿದರೆ ಪ್ರಯೋಜನವಿಲ್ಲ. ಸರಕಾರಿ ಕಾಲೇಜುಗಳಲ್ಲೆ ಮೂಲಭೂತ ಸೌಕರ್ಯ ಇಲ್ಲ. ಸರಕಾರಿ ಕಾಲೇಜುಗಳಿಗೆ ತಲಾ ಎರಡು ಕೋಟಿ ರೂ.ಗಳನ್ನು ನೀಡಿ. 500 ಕೋಟಿ ರೂ.ಗಳನ್ನು ಯಾಕೆ ಖರ್ಚು ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಬಿಜೆಪಿ ಸದಸ್ಯ ಚರಂತಿಮಠ ಮಾತನಾಡಿ, ದೇಶದಲ್ಲಿ ಇರುವ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ 50 ಕೋಟಿ ರೂ.ಬರುತ್ತದೆ ಎಂಬ ನಂಬಿಕೆಯಿಲ್ಲ. ಒಂದು ವಿವಿ ಅಧೀನದಲ್ಲಿ 100 ಕಾಲೇಜು ಇರಬೇಕು ಎಂದು ಸ್ಯಾಮ್ ಪಿತ್ರೋಡ ಹೇಳಿದ್ದಾರೆ. ಆದರೆ, ಇವತ್ತು ವಿವಿಗಳಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿಯಿವೆ. ಈ ಕಾಯ್ದೆಯನ್ನು ತಡೆ ಹಿಡಿದು ಪುನರ್ ಪರಿಶೀಲನೆ ಮಾಡಬೇಕು ಎಂದರು.

ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ವಿಧೇಯಕಕ್ಕೆ ಸಂಬಂಧಪಟ್ಟ ಸಚಿವರು ಇಲ್ಲ. ಅಲ್ಲದೆ, ಪಕ್ಷಾತೀತವಾಗಿ ಸದಸ್ಯರು ಸಹಮತ ವ್ಯಕ್ತಪಡಿಸುತ್ತಿಲ್ಲ. ಆದುದರಿಂದ, ಈ ವಿಧೇಯಕವನ್ನು ತಡೆ ಹಿಡಿಯುತ್ತಿರುವುದಾಗಿ ಪ್ರಕಟಿಸಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅನಗತ್ಯವಾದ ವೆಚ್ಚವನ್ನು ಕಡಿತ ಮಾಡಲು, ವ್ಯವಸ್ಥೆಯನ್ನು ಸುಧಾರಿಸಲು ನಾವು ಸಿದ್ಧರಿದ್ದೇವೆ. ನೀವು ಕೊಡುವಂತಹ ಸಲಹೆಗಳನ್ನು ಪಾಲಿಸಲು ನಾವು ತಯಾರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News