ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಂಡರೆ ಉ-ಕ ಭಾಗದ 7 ಜಿಲ್ಲೆಗಳಿಗೆ ಅನುಕೂಲ: ಎಸ್.ಆರ್.ಪಾಟೀಲ್

Update: 2020-09-25 18:34 GMT

ಬೆಂಗಳೂರು, ಸೆ.25: ಕೃಷ್ಣಾ ಮೇಲ್ದಂಜೆ ಯೋಜನೆ ಕುರಿತು ವಿಧಾನ ಪರಿಷತ್‍ನಲ್ಲಿ ಚರ್ಚೆ ಆರಂಭಿಸಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರು ಸಂಬಂಧಿಸಿದ ಸಚಿವರು, ಹಿರಿಯ ಅಧಿಕಾರಿಗಳು ಇಲ್ಲ ಎಂಬ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ನಿಯಮ 68ರ ಅಡಿ ಪರಿಷತ್‍ನಲ್ಲಿ ಚರ್ಚೆ ಆರಂಭಿಸಿದ ಪಾಟೀಲರು ತಮ್ಮ ಬೇಸರ ವ್ಯಕ್ತಪಡಿಸಿದರು. ಇವರಿಗೆ ಪ್ರತಿಪಕ್ಷ ಸದಸ್ಯರು ಬೆಂಬಲ ಸೂಚಿಸಿದರು. ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕೂಡ ಪಾಟೀಲರ ಪ್ರಸ್ತಾಪ ಬೆಂಬಲಿಸಿದರು. ಸಾಕಷ್ಟು ಬೇಸರ ವ್ಯಕ್ತಪಡಿಸಿದ ಪಾಟೀಲರು ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಮಾತು ಮುಂದುವರಿಸಿದರು.

ಕೃಷ್ಣಾ ಮೇಲ್ಡಡೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗೆ ನೀರು ಒದಗಿಸುವ ಮಹತ್ವದ ಯೋಜನೆ. ಮೂರು ರಾಜ್ಯಗಳ ಮಧ್ಯೆ ಹರಿಯುವ ನದಿ ನೀರಿನ ಬಗ್ಗೆ ಟ್ರಿಬ್ಯುನಲ್‍ನಲ್ಲಿ ನಿರ್ಣಯ ಕೈಗೊಂಡು 10 ವರ್ಷ ಕಳೆದಿದೆ. ಆದರೆ ಇದುವರೆಗೂ ಯಾವುದೇ ಬೆಳವಣಿಗೆ ಆಗಿಲ್ಲ. 22 ಗ್ರಾಮ ಈ ಯೋಜನೆ ಎತ್ತರಿಸುವಿಕೆಯಿಂದ ಮುಳುಗಡೆಗೆ ಒಳಗಾಗುತ್ತವೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ, ಮನೆ, ಇತರೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. 4.7 ಲಕ್ಷ ಹೆಕ್ಟೇರ್ ಪ್ರದೇಶದ ಫಲವತ್ತಾದ ಭೂಮಿಯನ್ನು ಒಟ್ಟು ಮೂರು ಹಂತದಲ್ಲಿ ಕಳೆದುಕೊಂಡಿದ್ದೇವೆ. ಬಾಗಲಕೋಟೆ ಇಡೀ ಪಟ್ಟಣ ಮುಳುಗಿದೆ. 1,04,515 ಮನೆಯನ್ನು ಕಳೆದುಕೊಂಡಿದ್ದೇವೆ. ಇದೊಂದು ಯೋಜನೆ ಪೂರ್ಣಗೊಂಡರೆ ಇಡೀ ದೇಶಕ್ಕೆ ದೊಡ್ಡ ಅನುಕೂಲ ಆಗಲಿದೆ. 30,32,613 ಎಕರೆ ನೀರಾವರಿ ಭೂಮಿಗೆ ಅನುಕೂಲ ಆಗಲಿದೆ. ಮೂರನೇ ಹಂತ ಪೂರ್ಣಗೊಂಡರೆ ಉತ್ತರ ಕರ್ನಾಟಕ ಭಾಗದ 7 ಜಿಲ್ಲೆಗಳಿಗೆ ಇದರ ಅನುಕೂಲ ಸಿಗಲಿದೆ.

904 ಟಿಎಂಸಿ ನೀರು ರಾಜ್ಯಕ್ಕೆ ಇದರಿಂದ ನೀಡಿಕೆ ಆಗಲಿದೆ. ಕಾವೇರಿ ಯೋಜನೆಯ ಮೂರು ಪಟ್ಟು ದೊಡ್ಡ ಯೋಜನೆ ಆಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಸಂದರ್ಭ ಅಭಿನಂದಿಸಿ, ಮೂರನೇ ಹಂತದ ಯೋಜನೆಗೆ ಹೇಗಾದರೂ ಅನುದಾನ ಕೊಡಿ ಎಂದು ಮನವಿ ಮಾಡಿದ್ದೆ. ಆದರೆ ಇನ್ನೂ ಆಗಿಲ್ಲ. 2012ರಲ್ಲಿ 17 ಸಾವಿರ ಕೋಟಿ ಇದ್ದದ್ದು 2017 ರಲ್ಲಿ 51 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಈಗ ಅದು 70-75 ಸಾವಿರ ಕೋಟಿಗೆ ಏರಿಕೆ ಆಗಬಹುದು ಎಂದು ವಿವರಿಸಿದರು. ಶೇ.58 ರಷ್ಟು ಹುದ್ದೆ ಖಾಲಿ ಇದೆ. ಅತಿ ದೊಡ್ಡ ಯೋಜನೆಗೆ ಈ ಬಜೆಟ್ ನಲ್ಲಿ ಒಂದು ರೂಪಾಯಿ ಕೂಡ ಅನುದಾನ ನೀಡಿಲ್ಲ. ಹುದ್ದೆ ಭರ್ತಿ ಆಗುತ್ತಿಲ್ಲ. ಇರುವ ಹುದ್ದೆ ವರ್ಗಾವಣೆ ಮಾಡಲಾಗುತ್ತಿದೆ.

ಪಕ್ಕದ ತೆಲಂಗಾಣ ರಾಜ್ಯದಲ್ಲಿ 1,20,000 ಕೋಟಿ ರೂ. ಮೊತ್ತದ ಬೃಹತ್ ಯೋಜನೆಯನ್ನು ಕೇವಲ 3 ವರ್ಷದಲ್ಲಿ ಪೂರ್ಣಗೊಳಿಸಿದೆ. ನಮಗೇನಾಗಿದೆ? ಮಹದಾಯಿ, ಕಾವೇರಿ ನೋಟಿಫಿಕೇಷನ್ ಮಾಡಿದ ರೀತಿ ಕೃಷ್ಣಾ ಮೇಲ್ದಂಡೆ ಯೋಜನೆಗೂ ಅನುಮತಿ ಕೊಡಿಸಿ. ನಾನು ಹೃದಯದಿಂದ ಮಾತನಾಡುತ್ತಿದ್ದೇನೆ, ನಾಲಿಗೆಯಿಂದ ಅಲ್ಲ. ನಮಗೂ ಸಹನೆ, ತಾಳ್ಮೆಗೆ ಒಂದು ಮಿತಿ ಇದೆ. ಎಲ್ಲವೂ ಒಡೆದು ಹೋಗುವ ದಿನ ಬರುತ್ತಿದೆ. ಅನುದಾನ ಸಿಗುತ್ತಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಭಾವುಕರಾಗಿ ನುಡಿದರು.

ಕಣ್ಣೀರು ಹರಿಸಿದ ಪಾಟೀಲರು: ನಮ್ಮ ಭಾವನೆಯ ಯೋಜನೆ ಇದು. ಇದೊಂದು ಯೋಜನೆ ಜತೆ ನಮ್ಮ ಭಾವನೆ ಇದೆ. ಆದಷ್ಟು ಬೇಗ ಯೋಜನೆಯ ನೋಟಿಫಿಕೇಷನ್ ಹೊರಡಿಸಬೇಕು. ಕೇವಲ 15 ದಿನದ ಕೆಲಸ, ಒಂದಿಷ್ಟು ಸ್ವಾದೀನ ಮಾಡಿಕೊಳ್ಳುವ ಕಾರ್ಯ ಮಾಡಿ. ಸುಪ್ರೀಂ ಕೋರ್ಟ್‍ನಿಂದ ನೋಟಿಫಿಕೇಷನ್ ಕೊಡಿಸಿ. ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಪರವಾನಗಿ ಕೊಡಿಸಿ. ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಧಾನಿ ಆಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿದ್ದರು. ಇಂಥ ಯೋಜನೆ ನನೆಗುದಿಗೆ ಬೀಳುತ್ತಿದೆ ಎಂದು ಭಾವುಕರಾದ ಎಸ್.ಆರ್. ಪಾಟೀಲ್ ಬಾವುಕರಾಗಿ ಕಣ್ಣೀರಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News