ಚಿಕ್ಕಮಗಳೂರು: 3ನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಇಲಾಖೆ ಗುತ್ತಿಗೆ, ಹೊರ ಗುತ್ತಿಗೆ ನೌಕರರ ಹೋರಾಟ

Update: 2020-09-26 13:09 GMT

ಚಿಕ್ಕಮಗಳೂರು, ಸೆ.26: ಕೊರೋನ ಸೋಂಕಿನ ನಿಯಂತ್ರಣಕ್ಕಾಗಿ ಆರೋಗ್ಯ ಸಿಬ್ಬಂದಿ ಪ್ರಾಣವನ್ನೂ ಲೆಕ್ಕಿಸದೇ ಶ್ರಮಿಸುತ್ತಿದ್ದಾರೆ. ಆದರೆ ಸರಕಾರ ಇಲಾಖೆಯ ಸಿಬ್ಬಂದಿ ಪೈಕಿ ಖಾಯಂ ನೌಕರರು ಹಾಗೂ ಗುತ್ತಿಗೆ ನಾಕರರ ನಡುವೆ ಭಾರೀ ತಾರತಮ್ಯ ನೀತಿ ಅನುಸರಿಸುತ್ತಿದೆ. ವೇತನ ಸೇರಿದಂತೆ ಉದ್ಯೋಗ ಭದ್ರತೆ, ವಿಮೆ ಸೌಲಭ್ಯ ಮತ್ತು ವೇತನ ನೀಡುವ ವಿಚಾರದಲ್ಲೂ ಮಲತಾಯಿ ಧೋರಣೆ ನೀತಿ ತೋರಲಾಗುತ್ತಿದೆ. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಕೆಲಸ ಸ್ಥಗಿತಗೊಳಿಸಿ ಹೋರಾಟ ಮುಂದುವರಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಆರಂಭಿಸಿರುವ ಅಸಹಕಾರ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೌಕರರು, ಕೊರೋನ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೋನ ವಾರಿಯರ್ಸ್ ಗಳ ಪೈಕಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಪೈಕಿ ಗುತ್ತಿಗೆ ಹಾಗೂ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸರಕಾರ ವೇತನ ಸೇರಿದಂತೆ ವಿವಿಧ ಸೌಲಭ್ಯಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರಕಾರ ನೀಡಿದೆಯಾದರೂ ಇದುವರೆಗೂ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ ಎಂದು ಅಳಲು ತೋಡಿಕೊಂಡರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಪೈಕಿ, ವೈದ್ಯರು, ನರ್ಸ್ ಗಳು, ಫಾರ್ಮಾಸಿಸ್ಟ್ ಗಳು, ಲ್ಯಾಬ್ ಟೆಕ್ನೀಷಿಯನ್ಸ್ ಮತ್ತಿತರ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗೆ ಖಾಯಂ ನೌಕರರಿಗೆ ನೀಡುತ್ತಿರುವ ವೇತನಕ್ಕಿಂತಲೂ ಕಡಿಮೆ ವೇತನ ನೀಡಲಾಗುತ್ತಿದೆ. ಸರಕಾರ ವೈದ್ಯಕೀಯೇತರ ಸಿಬ್ಬಂದಿಗೆ 18 ಸಾವಿರ ವೇತನ ನೀಡುತ್ತಿದೆ. ಆದರೆ ವೈದ್ಯಕೀಯ ಸಿಬ್ಬಂದಿಗೆ 9ರಿಂದ 14 ಸಾವಿರ ರೂ. ವೇತನ ನೀಡಲಾಗುತ್ತಿದೆ. ಸರಕಾರ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸರಕಾರಿ ವೈದ್ಯರ ಬೇಡಿಕೆಗಳನ್ನು ಈಡೇರಿಸಿದೆ. ಆದರೆ ಹೊರಗುತ್ತಿಗೆ, ಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಂತಿಯುತವಾಗಿ ಅಸಹಕಾರ ಹೋರಾಟ ಮಾಡುತ್ತಿದ್ದರೂ ಸರಕಾರ ವೈದ್ಯಾಧಿಕಾರಿಗಳ ಮೂಲಕ ನೋಟಿಸ್ ನೀಡುತ್ತಾ ಕೆಲಸದಿಂದ ಕಿತ್ತು ಹಾಕುವ ಬೆದರಿಕೆ ಹಾಕುತ್ತಿದೆ ಎಂದು ನೌಕರರು ತಿಳಿಸಿದರು.

ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸರಕಾರ ಸದ್ಯ ನೀಡುತ್ತಿರುವ ವೇತನದಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ಈ ನೌಕರರ ವೇತನವನ್ನು ಹೆಚ್ಚಿಸುವುದರೊಂದಿಗೆ ನೌಕರರು ಮೃತಪಟ್ಟಲ್ಲಿ 50 ಲಕ್ಷ ರೂ. ಪರಿಹಾರಧನ ನೀಡುವ ಯೋಜನೆಯನ್ನು ಗುತ್ತಿಗೆ, ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. ಗುತ್ತಿಗೆ ನೌಕರರಿಗೆ ಭತ್ಯೆ, ರಜೆ, ಪದೋನ್ನತಿ, ವರ್ಗಾವಣೆ, ಸಮಾನ ಕೆಲಸಕ್ಕೆ ಸಮಾನ ವೇತನ, ಪರಿಷ್ಕೃತ ವೇತನ, ವೈದ್ಯಕೀಯ ಸೌಲಭ್ಯ, ಬ್ಯಾಂಕ್ ಸಾಲ ಸೌಲಭ್ಯ ಸೇರಿದಂತೆ ಹೊರ ಗುತ್ತಿಗೆ ಪದ್ಧತಿಯನ್ನೂ ಕೈಬಿಡಬೇಕೆಂದ ಅವರು, ಬೇಡಿಕೆ ಈಡೇರಿಸುವವರೆಗೂ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಗುತ್ತಿಗೆ, ಹೊರಗುತ್ತಿಗೆ ನೌಕರರಾದ ಜ್ಯೋತಿ, ಅಂಜಲಿ, ಪ್ರಥಮ್, ನಿತ್ಯಾ, ಗಿರೀಶ್, ಡಾ.ಸುಭಾಷ್, ದೀಪು, ವೆಂಕಟೇಶ್, ಮಧು, ಸಂತೋಷ್, ರಘು, ಚೇತನ್, ಪ್ರಕಾಶ್, ಹೂವಣ್ಣ, ಮುಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News