ಕೋರ್ಟ್ ಗಳಿಗೆ ಬರುವವರಿಗೆ ರ‍್ಯಾಪಿಡ್ ಪರೀಕ್ಷೆ ನಡೆಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-09-26 18:40 GMT

ಬೆಂಗಳೂರು, ಸೆ.26: ರಾಜ್ಯದ ನ್ಯಾಯಾಲಯಗಳಲ್ಲಿ ಸದ್ಯದಲ್ಲೇ ಫಿಸಿಕಲ್ ಕೋರ್ಟ್‍ಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ಹಾಜರಾಗುವ ಸಾಕ್ಷಿದಾರರು ಹಾಗೂ ಆರೋಪಿಗಳಿಗೆ ರ‍್ಯಾಪಿಡ್ ಟೆಸ್ಟ್ ನಡೆಸಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರಕಾರಕ್ಕೆ ನಿರ್ದೇಶಿಸಿದೆ.

ಕೊರೋನ ನಡುವೆಯೂ ನ್ಯಾಯಾಲಯಗಳು ಸುರಕ್ಷಿತವಾಗಿ ಮತ್ತು ನಿರಂತರವಾಗಿ ನಡೆಸುವ ನಿಟ್ಟಿನಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ನ್ಯಾಯಾಲಯಗಳಲ್ಲಿ ಭೌತಿಕ ಕಲಾಪ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ನ್ಯಾಯಾಲಯಗಳಿಗೆ ಬರುವ ಆರೋಪಿಗಳು ಹಾಗೂ ಸಾಕ್ಷೀದಾರರಿಗೆ ರ‍್ಯಾಪಿಡ್ ಟೆಸ್ಟ್ ನಡೆಸಲು ಕ್ರಮ ಕೈಗೊಳ್ಳಬೇಕು.  ಈ ಸಂಬಂಧ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಬೇಕು ಎಂದು ಸೂಚಿಸಿದೆ. ಸಂಚಾರಿ ಪರೀಕ್ಷಾ ಘಟಕಗಳನ್ನು ಸ್ಥಾಪಿಸಲು ಸಾಧ್ಯವಿರುವ ಕುರಿತು ಪರಿಶೀಲಿಸುವಂತೆಯೂ ಸರಕಾರಕ್ಕೆ ನಿರ್ದೇಶಿಸಿದೆ.

ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಸೆ.28ರ ಸೋಮವಾರದಿಂದ 55 ನ್ಯಾಯಾಲಯಗಳಲ್ಲಿ ಫಿಸಿಕಲ್ ಕೋರ್ಟ್ ಆರಂಭವಾಗಲಿದೆ. ಇನ್ನುಳಿದ ನ್ಯಾಯಾಲಯಗಳಲ್ಲಿ ಅಕ್ಟೋಬರ್ 5 ಮತ್ತು 12 ರಿಂದ ಫಿಸಿಕಲ್ ಕೋರ್ಟ್ ಗಳು ಕಾರ‍್ಯಾರಂಭ ಮಾಡಲಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News