ಮಲೆನಾಡು ವ್ಯಾಪ್ತಿಯಲ್ಲಿ ಅ.26ರಿಂದ ರಸ್ತೆಗಿಳಿಯಲಿವೆ ಸಹಕಾರಿ ಸಾರಿಗೆ ಬಸ್‍ಗಳು

Update: 2020-09-27 15:26 GMT

ಚಿಕ್ಕಮಗಳೂರು, ಸೆ.27: ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ, ಸಹಕಾರಿ ತತ್ವದಡಿಯಲ್ಲಿ ಕಾರ್ಮಿಕರೇ ಮಾಲಕರಾಗಿದ್ದ, ಏಷ್ಯಾ ಖಂಡದಲ್ಲೇ ಮಾದರಿ ಸಾರಿಗೆ ಸಂಸ್ಥೆಯಾಗಿದ್ದ ಸಹಕಾರಿ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟದಿಂದಾಗಿ ಕೆಲ ತಿಂಗಳುಗಳ ಹಿಂದೆ ಸ್ಥಗಿತಗೊಂಡಿತ್ತು. ಆದರೆ ತನ್ನ ಶೈಕ್ಷಣಿಕ ಹಂತದಲ್ಲಿ ಸಹಕಾರಿ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಓಡಾಡಿಕೊಂಡಿದ್ದ, ಸದ್ಯ ಬೆಂಗಳೂರಿನಲ್ಲಿರುವ ಉದ್ಯಮಿಯೊಬ್ಬರು ಸಹಕಾರಿ ಸಂಸ್ಥೆಯ ನೆರವಿಗೆ ಧಾವಿಸಿದ್ದು, ಸಂಸ್ಥೆಯ ಪುನಶ್ಚೇತನಕ್ಕೆ ಮುಂದಾಗಿದ್ದಾರೆ. ಅಲ್ಲದೇ ಅ.26ರಿಂದ ಮಲೆನಾಡಿನಲ್ಲಿ ಸಹಕಾರಿ ಸಾರಿಗೆ ಬಸ್‍ಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಮಹೇಂದ್ರ ಎಂಬವರು ಸಂಸ್ಥೆಯ ಪುನಶ್ಚೇತನಕ್ಕೆ ಈಗಾಗಲೇ ಮಾತುಕತೆ ನಡೆಸಿದ್ದು, ಬಸ್‍ಗಳನ್ನು ರಸ್ತೆಗಿಳಿಸಲು ಅಗತ್ಯ ಇರುವ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಇನ್ನು ಮುಂದೆ ಸಹಕಾರಿ ಸಾರಿಗೆ ಹೆಸರಿನೊಂದಿಗೆ ಬಸ್‍ಗಳು ಸಾರಿಗೆ ಸೇವೆ ನೀಡಲಿವೆ. ಆದರೆ ಸಾರಿಗೆ ಸಂಸ್ಥೆಯ ಆಡಳಿತವು ವೀರಭದ್ರ ಮಹೇಂದ್ರ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಹೆಸರಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ವೀರಭದ್ರ ಮಹೇಂದ್ರ ಟ್ರಾನ್ಸ್‌ಪೋರ್ಟ್ ಹೆಸರಿನಡಿ ಸಂಸ್ಥೆಯ ವ್ಯವಹಾರ 
ಸಹಕಾರಿ ಸಾರಿಗೆ ಸಂಸ್ಥೆಯ ಅಭಿಮಾನಿಯಾಗಿದ್ದ ಉದ್ಯಮಿ ಮಹೇಂದ್ರ ಅವರು ತಾನು ಶಿಕ್ಷಣ ಪಡೆಯಲು ನೆರವಾಗಿದ್ದ ಸಹಕಾರಿ ಸಾರಿಗೆಯ ದುಸ್ಥಿತಿಯನ್ನು ಪತ್ರಿಕೆಗಳಲ್ಲಿ ಗಮನಿಸಿದ್ದರು. ಹೀಗಾಗಿ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಆರ್ಥಿಕ ನೆರವಿನೊಂದಿಗೆ ಸಾರಿಗೆ ಸಂಸ್ಥೆಯನ್ನು ಮುನ್ನಡೆಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆಡಳಿತ ಮಂಡಳಿ ಸಮ್ಮತಿ ನೀಡಿರುವುದರಿಂದ ಇನ್ನು ಮುಂದೆ ಸಹಕಾರಿ ಸಾರಿಗೆ ಹೆಸರಿನೊಂದಿಗೆ ಬಸ್‍ಗಳು ಸಾರಿಗೆ ಸೇವೆ ನೀಡಲಿವೆ. ಆದರೆ ಸಾರಿಗೆ ಸಂಸ್ಥೆಯ ಆಡಳಿತವು ವೀರಭದ್ರ ಮಹೇಂದ್ರ ಟ್ರಾನ್ಸ್‍ಸ್ಪೊರ್ಟ್ ಸಂಸ್ಥೆಯ ಹೆಸರಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. 

ಮಲೆನಾಡಿನ ಜೀವನಾಡಿ, ಸಂಪರ್ಕದ ಕೊಡಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್ ಮತ್ತೆ ರಸ್ತೆಗಿಳಿಯುತ್ತಿದ್ದು, ಕಾಫಿನಾಡು ಚಿಕ್ಕಮಗಳೂರು ಸೇರಿದಂತೆ ಉಡುಪಿ ಜಿಲ್ಲೆಗಳ ಜನರ ಸಂತಸಕ್ಕೆ ಕಾರಣವಾಗಿದೆ. ಈ ಹಿಂದೆ ಉತ್ತಮ ಸಾರಿಗೆ ಸೌಕರ್ಯಗಳಿಲ್ಲದ ಕಾಲಘಟ್ಟದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳಲ್ಲಿ ಜನರಿಗೆ ಉತ್ತಮ ಸಾರಿಗೆ ಸೌಕರ್ಯ ನೀಡಿದ್ದ ಸಹಕಾರಿ ಸಂಸ್ಥೆಗೆ ಕಾರ್ಮಿಕರೇ ಮಾಲಕರಾಗಿದ್ದು, ಸಹಕಾರಿ ತತ್ವದಡಿಯಲ್ಲಿ ಈ ಸಂಸ್ಥೆ ಮಲೆನಾಡು ಭಾಗದ ಮೂರು ಜಿಲ್ಲೆಗಳಲ್ಲಿ ಸಾರಿಗೆ ಸಂಪರ್ಕದ ಸೇವೆ ಕಲ್ಪಿಸಿತ್ತು. 

1991ರಲ್ಲಿ ಶಂಕರ್ ಟ್ರಾನ್ಸ್‌ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆಯೇ ಸಹಕಾರ ಸಾರಿಗೆ ಸಂಸ್ಥೆ. ಕಾರ್ಮಿಕರೇ ಮಾಲಕರಾಗಿ ಮೊದಲ ಬಾರಿಗೆ 6 ಬಸ್‍ಗಳೊಂದಿಗೆ ಮಲೆನಾಡಿನಲ್ಲಿ ಸೇವೆ ಆರಂಭಿಸಿದ ಸಹಕಾರ ಸಾರಿಗೆ ಸಂಸ್ಥೆ ಇದೀಗ ತನ್ನ ಹೆಸರಿನಲ್ಲಿ ಸದ್ಯ 76 ಬಸ್‍ಗಳನ್ನು ಹೊಂದಿದೆ. ಕೊಪ್ಪ ಪಟ್ಟಣದಲ್ಲಿ ಸಹಕಾರಿ ಸಂಸ್ಥೆಯ ಬೃಹತ್ ಆಡಳಿತ ಮಂಡಳಿ ಕಟ್ಟಡ ಸೇರಿದಂತೆ 1 ಪೆಟ್ರೋಲ್ ಬಂಕ್ ಹಾಗೂ ಕೊಪ್ಪ, ಶೃಂಗೇರಿ ಪಟ್ಟಣಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ಇತರ ಆಸ್ತಿಗಳೂ ಇವೆ. 300 ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟಿರುವ ಈ ಸಂಸ್ಥೆ ಏಷ್ಯಾದಲ್ಲೇ ಮಾದರಿ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿತ್ತು. ಸಹಕಾರ ಸಾರಿಗೆ ಸಂಸ್ಥೆಯ ಸೇವೆಗೆ ಜಪಾನ್ ಸಹ ಮೆಚ್ಚುಗೆ ವ್ಯಕ್ತಪಡಿಸಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಈ ವಿಷಯದ ಕುರಿತು ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದುಕೊಂಡಿದ್ದರು. ಮಣಿಪಾಲ ಸ್ನಾತಕೋತ್ತರ ಪದವಿಗೆ ಸಂಸ್ಥೆಯ ಸಾಧನೆ ಪಠ್ಯವಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ಸಂಸ್ಥೆಯ ಕಾರ್ಮಿಕರ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ಶೇ.50 ರಿಯಾಯಿತಿಯೊಂದಿಗೆ ಸೇವೆ ಸಲ್ಲಿಸಿದ ಸಂಸ್ಥೆ ಮಲೆನಾಡು ಗುಡ್ಡಗಾಡು ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪರೋಕ್ಷವಾಗಿ ಸಹಾಯ ಮಾಡುವ ಮೂಲಕ ಸೇವೆಯನ್ನೆ ಧ್ಯೇಯ ಮಾಡಿಕೊಂಡಿದ್ದ ಸಂಸ್ಥೆ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿತ್ತು.

ಭರವಸೆ ಈಡೇರಿಸದ ಸರಕಾರ
ಕಾರ್ಮಿಕರೇ ಕಟ್ಟಿ ಬೆಳೆಸಿದ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಡಿಸೇಲ್ ಬೆಲೆ ಏರಿಕೆಯಿಂದ ತಿಂಗಳಿಗೆ 24 ಲಕ್ಷ ನಷ್ಟ ಅನುಭವಿಸುತ್ತಿತ್ತು. ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ಸೇರಿ ಒಟ್ಟು ವರ್ಷಕ್ಕೆ 6 ಕೋಟಿ ಹೊರೆ ಸಂಸ್ಥೆಯ ಮೇಲೆ ಬಿದ್ದಿತ್ತು. ಸಂಸ್ಥೆ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್ ಉಳಿಕೆ ಹಣವನ್ನ ನೀಡುವಂತೆ ಸರಕಾರಕ್ಕೆ ಸಹಾಯ ಹಸ್ತವನ್ನು ಚಾಚಿತು. ಮಲೆನಾಡಿನ ಜನರ ಪಾಲಿನ ನೆಚ್ಚಿನ ಸಂಸ್ಥೆಯಾಗಿದ್ದ ಸಹಕಾರಿ ಸಾರಿಗೆ ಸಂಸ್ಥೆ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ಸೇವೆಯನ್ನು ನಿಲ್ಲಿಸಿತ್ತು. ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಸಂಸ್ಥೆಯನ್ನೇ ನಂಬಿ ಜೀವನ ನಡೆಸುತ್ತಿದ್ದ 300 ಕಾರ್ಮಿಕರ ಬದುಕು ಬೀದಿಗೆ ಬಂದಿತ್ತು. ಸಂಸ್ಥೆಯ ಪುನಶ್ಚೇತನಕ್ಕೆ ನೆರವು ನೀಡಬೇಕೆಂದು ಸರಕಾರದ ಬಳಿ ಕಾರ್ಮಿಕರ ನೇತೃತ್ವದ ಆಡಳಿತ ಮಂಡಳಿ ಅಂಗಲಾಚಿತ್ತು. ಆದರೆ ಸರಕಾರ ನೆರವಿನ ಭರವಸೆ ನೀಡಿತೇ ಹೊರತು ಯಾವುದೇ ಆರ್ಥಿಕ ನೆರವು ನೀಡಲಿಲ್ಲ ಎನ್ನಲಾಗಿದೆ.

ಈ ನಡುವೆ ಕೊರೋನ ವಕ್ಕರಿಸಿದ್ದರಿಂದ ಸಹಕಾರಿ ಸಾರಿಗೆ ಸಂಸ್ಥೆಯ ಕಾರ್ಮಿಕರ ಬದುಕು ಅಕ್ಷರಶಃ ನರಕವಾಗಿತ್ತು. ಇನ್ನೇನು ಸಹಕಾರಿ ಸಾರಿಗೆ ಸಂಸ್ಥೆ ಇನ್ನು ನೆನಪು ಮಾತ್ರ ಎಂದು ಮಲೆನಾಡಿನ ಜನತೆ ಬೇಸರಗೊಂಡಿದ್ದ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಅ.26ರ ಆಯುಧಪೂಜೆಯ ದಿನದಂದು ಸಹಕಾರಿ ಸಾರಿಗೆ ಬಸ್‍ಗಳು ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರಸ್ತೆಗಿಳಿಯಲಿವೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.

ನೆರವು ನೀಡಿದ ಉದ್ಯಮಿ
ತನ್ನ ಶೈಕ್ಷಣಿಕ ಜೀವನದ ಹಂತದಲ್ಲಿ ಸಹಕಾರಿ ಸಾರಿಗೆ ಬಸ್‍ಗಳಲ್ಲೇ ಸಂಚಾರ ಮಾಡುತ್ತಾ ಶಿಕ್ಷಣ ಪೂರೈಸಿದ್ದ ಮಹೇಂದ್ರ ಎಂಬವರು ಸದ್ಯ ಸಹಕಾರಿ ಸಾರಿಗೆ ಸಂಸ್ಥೆಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನವರಾದ ಸದ್ಯ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಮಹೇಂದ್ರ, ಸಂಸ್ಥೆಯ ಪುನಶ್ಚೇತನಕ್ಕೆ ಈಗಾಗಲೇ ಮಾತುಕತೆ ನಡೆಸಿದ್ದು, ಬಸ್‍ಗಳನ್ನು ರಸ್ತೆಗಿಳಿಸಲು ಅಗತ್ಯ ಇರುವ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಅ.26ಕ್ಕೆ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 60 ಬಸ್‍ಗಳು ರಸ್ತೆಗೆ
ಅ.26ರ ವಿಜಯದಶಮಿ ದಿನದಂದು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲಾದ್ಯಂತ ಸಹಕಾರಿ ಸಾರಿಗೆ ಸಂಸ್ಥೆಯ 76 ಬಸ್‍ಗಳ ಪೈಕಿ 60 ಬಸ್‍ಗಳು ಮತ್ತೆ ರಸ್ತೆಗಿಳಿಯಲಿವೆ. ಉಳಿದ ಬಸ್‍ಗಳು ಹಂತ ಹಂತವಾಗಿ ರಸ್ತೆಗಿಳಿಯಲಿವೆ. 60 ಬಸ್‍ಗಳು ಸಹಕಾರಿ ಸಂಸ್ಥೆಯ ಹೆಸರಿನಲ್ಲೇ ಸೇವೆ ಮುಂದುವರಿಸಲಿದ್ದು, ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 300 ಕಾರ್ಮಿಕರನ್ನು ಮತ್ತೆ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಉದ್ಯಮಿ ಮಹೇಂದ್ರ ಅವರ ವೀರಭದ್ರ ಮಹೇಂದ್ರ ಸಾರಿಗೆ ಸಂಸ್ಥೆಯು ಸಹಕಾರಿ ಸಾರಿಗೆ ಬಸ್‍ಗಳ ಉಸ್ತುವಾರಿ ನಿರ್ವಹಿಸಲಿದೆ.

ಬೆಂಗಳೂರಿನ ಉದ್ಯಮಿ ಮಹೇಂದ್ರ ಅವರೇ ಸಂಸ್ಥೆ ಮುನ್ನಡೆಸುವುದಾಗಿ ಪ್ರಸ್ತಾವ ಮಾಡಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂಸ್ಥೆಯನ್ನು ಹೇಗಾದರೂ ಮಾಡಿ ಮತ್ತೆ ಮುನ್ನಡೆಸಬೇಕೆಂಬುದು ಸಹಕಾರಿ ಸಾರಿಗೆ ಸಂಸ್ಥೆಯ ಮಹದಾಸೆಯಾಗಿತ್ತು. ಇದಕ್ಕಾಗಿ ಸರಕಾರ ಬಳಿ ಸಹಾಯ ಕೇಳಿದ್ದೆವು. ಆದರೆ ಸರಕಾರ ಸ್ಪಂದಿಸಲಿಲ್ಲ. ಸಂಸ್ಥೆಯ ಕಾರ್ಮಿಕರು ಹಾಗೂ ಮಲೆನಾಡಿನ ಸಾರಿಗೆ ಸೇವೆ ದೃಷ್ಟಿಯಿಂದ ಉದ್ಯಮಿ ಮಹೇಂದ್ರ ಅವರ ಆರ್ಥಿಕ ನೆರವಿನಿಂದಾಗಿ ಮಲೆನಾಡಿನಲ್ಲಿ ಮತ್ತೆ ಸಹಕಾರಿ ಸಾರಿಗೆ ಬಸ್‍ಗಳು ರಸ್ತೆಗಿಳಿಯಲಿವೆ. ಸಂಸ್ಥೆಯನ್ನು ಮಹೇಂದ್ರ ಅವರಿಗೆ ಮಾರಾಟ ಮಾಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸರಕಾರದ ನೆರವು ಸಿಗದಿದ್ದಲ್ಲಿ ಸಹಕಾರಿ ಸಾರಿಗೆ ಸಂಸ್ಥೆಯ ಬಸ್‍ಗಳು, ಬಂಕ್, ಕಟ್ಟಡಗಳನ್ನು ಮಾರಾಟ ಮಾಡಲಾಗುವುದು. ಸಹಕಾರಿ ಸಂಸ್ಥೆ ಬೇರೆ ಆರ್ಥಿಕ ವ್ಯವಹಾರಗಳತ್ತ ಮುಖ ಮಾಡಲಿದೆ.

- ಧರ್ಮಪ್ಪ, ಸಹಕಾರಿ ಸಾರಿಗೆ ಆಡಳಿತ ಮಂಡಳಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News