ಬಾಬಾಬುಡನ್‌ಗಿರಿ ಗುಹೆಯಲ್ಲಿ ವಿಡಿಯೊ, ಫೋಟೊ ತೆಗೆಸಿಕೊಂಡ ಸಚಿವ ಸಿ.ಟಿ.ರವಿ

Update: 2020-09-28 09:17 GMT

ಚಿಕ್ಕಮಗಳೂರು, ಸೆ.28: ಬಾಬಾಬುಡನ್‌ಗಿರಿಗೆ ಸೋಮವಾರ ಭೇಟಿ ನೀಡಿದ ಸಚಿವ ಸಿ.ಟಿ.ರವಿ ಗುಹೆಯೊಳಗೆ ತೆರಳಿ ದತ್ತ ಪಾದುಕೆ ದರ್ಶನ ಮಾಡಿದ್ದು, ಈ ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ರವಿವಾರ ನಗರಕ್ಕೆ ಆಗಮಿಸಿದ್ದ ಸಿ.ಟಿ.ರವಿ ಇಂದು ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ಬಾಬಾಬುಡನ್‌ಗಿರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಗುಹೆಯೊಳಗೆ ಇರುವ ದತ್ತ ಪಾದುಕೆಗಳ ದರ್ಶನ ಪಡೆದಿದ್ದಾರೆ.

ದರ್ಶನದ ವೇಳೆ ಸಿ.ಟಿ.ರವಿ ಜೊತೆಯಲ್ಲಿದ್ದವರು ಗುಹೆಯೊಳಗೆ ವಿಡಿಯೊ ಮಾಡಿರುವುದಲ್ಲದೇ ಪೊಟೊಗಳನ್ನೂ ಕೂಡಾ ತೆಗೆದಿರುವುದು ವಿವಾದಕ್ಕೆ ಕಾರಣವಾಗಿದೆ.

ಬಾಬಾ ಬುಡನ್ ಗಿರಿ ದತ್ತಪೀಠದ ವಿವಾದದ ಹಿನ್ನೆಲೆಯಲ್ಲಿ ಸರಕಾರದ ಮುಜರಾಯಿ ಇಲಾಖೆ ಈ ಹಿಂದೆ ಗುಹೆಯೊಳಗೆ ಫೋಟೊ ತೆಗೆಯುವುದು, ವಿಡಿಯೊ ಮಾಡುವುದನ್ನು ನಿಷೇಧಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ದತ್ತ ಪಾದುಕೆಗಳ ದರ್ಶನಕ್ಕೆ ಬರುವವರಿಗೆ ಜಿಲ್ಲಾಡಳಿತ ಗುಹೆಯೊಳಗೆ ಫೋಟೊ, ವಿಡಿಯೊ ತೆಗೆಯಬಾರದೆಂದು ಕಟ್ಟುನಿಟ್ಟಿನ ಷರತ್ತು ವಿಧಿಸುತ್ತದೆ.

ಆದರೆ ಸೋಮವಾರ ಸಚಿವ ಸಿ.ಟಿ.ರವಿ ಹಾಗೂ ಅವರ ಬೆಂಬಲಿಗರು ಗುಹೆಯೊಳಗೆ ಪೊಟೊ ತೆಗೆದಿರುವುದಲ್ಲದೇ, ವಿಡಿಯೋ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೊ ಮತ್ತು ಫೋಟೊಗಳು ವೈರಲ್ ಆಗುತ್ತಿದ್ದು, ಸರಕಾರದ ಪ್ರತಿನಿನಿಧಿಯಾಗಿ, ವಿವಾದಿತ ಸ್ಥಳವೊಂದರ ಬಗ್ಗೆ ಕಾನೂನುಗಳ ಮಾಹಿತಿ ಇದ್ದರೂ ಸಚಿವರು ಉದ್ದೇಶಪೂರ್ವಕವಾಗಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.

ದತ್ತ ಪಾದುಕೆಗಳ ವಿಡಿಯೊ, ಫೋಟೊ ತೆಗೆಯುತ್ತಿದ್ದ ಸಂದರ್ಭ ಸಚಿವ ಸಿ.ಟಿ.ರವಿಯೊಂದಿಗೆ ಜಿಲ್ಲೆಯ ಮುಜರಾಯಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರೂ ನಿಯಮ ಉಲ್ಲಂಘನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸದಿರುವುದು ಟೀಕೆಗೆ ಕಾರಣವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News