ಚುನಾವಣೆ ಎದುರಿಸಲು ನಾವು ಸಿದ್ಧ: ಸಿದ್ದರಾಮಯ್ಯರಿಗೆ ಸಿಎಂ ಯಡಿಯೂರಪ್ಪ ತಿರುಗೇಟು

Update: 2020-09-28 12:50 GMT

ಬೆಂಗಳೂರು, ಸೆ. 28: `ಭೂ ಸುಧಾರಣೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ನಾವು ಸಿದ್ಧ. ನೀವು ಚುನಾವಣೆಗೆ ಬನ್ನಿ ಎಂದು ನಾನು ವಿಧಾನಸಭೆಯಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದೇನೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು(ಎಪಿಎಂಸಿ) ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ನಷ್ಟದಲ್ಲಿರುವ ಎಪಿಎಂಸಿಗಳನ್ನೂ ಮುಚ್ಚುವ ಪ್ರಶ್ನೆಯೇ ಇಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಲಾಭ ಆಗಲಿದೆ. ರೈತರು ದಲ್ಲಾಳಿಗಳ ಹಿಡಿತದಿಂದ ಬಿಡುಗಡೆ ಅಗಲಿದ್ದಾರೆ. ರೈತರ ಅನುಕೂಲಕ್ಕಾಗಿಯೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ' ಎಂದು ಸ್ಪಷ್ಟಣೆ ನೀಡಿದರು.

ರೈತ ಹೋರಾಟದ ಹಿನ್ನೆಲೆಯಿಂದ ಬಂದ ನಾನು ಸ್ವತಃ ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಅಲ್ಲಿ ಏನು ನಡೆಯುತ್ತದೆ ಎಂಬುದು ಗೊತ್ತಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಾಯಕರಿಗೂ ಇದು ಗೊತ್ತಿದೆ. ಆದರೆ, ರಾಜಕೀಯ ದುರುದ್ದೇಶದಿಂದ ರೈತರನ್ನು ಪ್ರಚೋದಿಸುತ್ತಿದ್ದಾರೆ. ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ಪಡೆಯಲಿದ್ದಾರೆ ಎಂದು ಹೇಳಿದರು.

ಈ ಹಿಂದೆ ಕಾಂಗ್ರೆಸ್ ಪಕ್ಷವೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿತ್ತು. ರಿಲಯನ್ಸ್ ನಂತಹ ದೊಡ್ಡ ದೊಡ್ಡ ಕಂಪೆನಿಗಳಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಟ್ಟವರು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಲಿ ಎಂದು ಆಗ್ರಹಿಸಿದ ಯಡಿಯೂರಪ್ಪ, ರೈತರಿಗೆ ಯಾವುದೇ ಕಾರಣಕ್ಕೂ ಸರಕಾರದ ಈ ತಿದ್ದುಪಡಿಯಿಂದ ಅನ್ಯಾಯ ಆಗುವುದಿಲ್ಲ ಎಂದು ಪುನರುಚ್ಚರಿಸಿದರು.

ಷರತ್ತು ವಿಧಿಸಿದೆ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯೂ ರೈತರ ಪರವಾಗಿದೆ. ರಾಜ್ಯದಲ್ಲಿ 18ಲಕ್ಷ ಎಕರೆ ಕೃಷಿ ಜಮೀನು ಸಾಗುವಳಿ ಆಗದೇ ಪಾಳು ಬೀಳುತ್ತಿದೆ. ಈಗ ತಂದಿರುವ ತಿದ್ದುಪಡಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಅವಕಾಶ ಒದಗಿಸಲಿದೆ. ಇದರಿಂದಾಗಿ ಕೃಷಿ ಹೆಚ್ಚಲಿದೆ. ಆದರೆ, ರಾಜ್ಯದಲ್ಲಿ ಕಾಯ್ದೆಗಳ ತಿದ್ದುಪಡಿ ನೆಪದಲ್ಲಿ ರೈತರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಟೀಕಿಸಿದರು.

ಐದು ಮಂದಿ ಕುಟುಂಬಕ್ಕೆ ಈ ಹಿಂದೆ ಇದ್ದ ಮಿತಿಂ, 54 ಎಕರೆಗಳಷ್ಟು ಮಾತ್ರ ಜಮೀನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ನೀರಾವರಿ ಜಮೀನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು, ಸಣ್ಣ ಮತ್ತು ಅತಿಸಣ್ಣ ರೈತರ ಜಮೀನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ಯಡಿಯೂರಪ್ಪ ಇದೇ ವೇಳೆ ಭರವಸೆ ನೀಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಏನು ಹೇಳುತ್ತಿದ್ದಾರೆಂಬುದು ಜನರಿಗೆ ಗೊತ್ತಿದೆ. ಅವರ ಪಕ್ಷವೇ ಈ ತಿದ್ದುಪಡಿಗಳ ಪ್ರಸ್ತಾವ ಸಿದ್ಧಪಡಿಸಿತ್ತು. ಆದರೆ, ಇದೀಗ ಜನರಿಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯ್ದೆಗಳ ತಿದ್ದುಪಡಿ ವಿಷಯದಲ್ಲಿ ರೈತ ಸಂಘಟನೆಗಳ ಜತೆ ಮುಕ್ತ ಚರ್ಚೆಗೆ ನಾನು ಸದಾ ಸಿದ್ಧ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

'ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳಿಂದ ರಾಜ್ಯದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ನಾನು ರೈತರ ಮಗನಾಗಿ, ರೈತರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅನ್ನ ಕೊಡುವ ಅನ್ನದಾತನಿಗೆ ಕಿಂಚಿತ್ತೂ ತೊಂದರೆಯಾಗದಂತೆ, ನಾಡಿನ ಅನ್ನದಾತರ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಚರ್ಚೆಮಾಡಿ ತಿದ್ದುಪಡಿ ತರಲಾಗಿದೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News