ವಿಮರ್ಶಕ ಜಿ.ಎಸ್.ಆಮೂರ, ಸಾಹಿತಿ ಹೀ.ಚಿ.ಶಾಂತವೀರಯ್ಯ ನಿಧನ

Update: 2020-09-28 12:22 GMT

ಬೆಂಗಳೂರು, ಸೆ.28: ಹಿರಿಯ ವಿಮರ್ಶಕ ಡಾ. ಜಿ.ಎಸ್.ಆಮೂರ (96) ಹಾಗೂ ಹಿರಿಯ ಸಾಹಿತಿ ಮತ್ತು ವಾಗ್ಮಿ ಹೀ.ಚಿ.ಶಾಂತವೀರಯ್ಯ ಮೃತಪಟ್ಟಿದ್ದಾರೆ.

ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ಅವರ ಪುತ್ರನ ಮನೆಯಲ್ಲಿ ಆಮೂರ ಅವರು ಮೃತಪಟ್ಟಿದ್ದರೆ, ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಹೀ.ಚಿ.ಶಾಂತವೀರಯ್ಯ ನಿಧನರಾಗಿದ್ದಾರೆ.

ಆಮೂರ ಅವರು ವಯೋಸಹಜ ನಿಶಕ್ತಿಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು, ಕನ್ನಡ ಸಾಹಿತ್ಯ ವಿಮರ್ಶೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ  ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1925ರ ಮೇ 8ರಂದು ಧಾರವಾಡ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಜನಿಸಿದ ಆಮೂರರು, ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದವರು. ಕನ್ನಡ, ಇಂಗ್ಲಿಷ್, ಸಂಸ್ಕೃತ, ಮರಾಠಿ ಭಾಷೆ ಸಾಹಿತ್ಯ ಬಲ್ಲವರಾಗಿದ್ದರು.

ಹೀ.ಚಿ.ಶಾಂತವೀರಯ್ಯ ಕಳೆದ ನಾಲ್ಕು ತಿಂಗಳಿನಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದರು. ಇವರನ್ನು ಇಲ್ಲಿನ ಕನ್ನಲ್ಲಿಯ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಮುಖ್ಯಮಂತ್ರಿ ಸಂತಾಪ: ಕನ್ನಡದ ಹಿರಿಯ ವಿದ್ವಾಂಸ ಹೀ.ಚಿ.ಶಾಂತವೀರಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಖ್ಯಾತ ವಾಗ್ಮಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಸಹ ಸಂಪಾದಕರೂ ಆಗಿದ್ದ ಶಾಂತವೀರಯ್ಯ ಅವರು ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಸೇರಿದಂತೆ ಹತ್ತಾರು ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. 

ಯಾವುದೇ ವಿಷಯದ ಬಗ್ಗೆ ಆಕರ್ಷಕವಾಗಿ ಭಾಷಣ ಮಾಡುತ್ತಿದ್ದ ಅವರು ಸಾವಿರಾರು ಕನ್ನಡೇತರರಿಗೆ ಕನ್ನಡ ಕಲಿಸಿದ್ದಾರೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದಿರುವ ಮುಖ್ಯಮಂತ್ರಿಗಳು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News