ಸುಗ್ರೀವಾಜ್ಞೆಗಳಿಗೆ ವಿರೋಧ: 'ಕರ್ನಾಟಕ ಬಂದ್' ಭಾಗಶಃ ಯಶಸ್ವಿ

Update: 2020-09-28 12:46 GMT

ಬೆಂಗಳೂರು, ಸೆ.28: ಕೇಂದ್ರ ಮತ್ತು ರಾಜ್ಯ ಸರಕಾರಗಳ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿ ಇನ್ನಿತರೆ ಸುಗ್ರೀವಾಜ್ಞೆಗಳನ್ನು ಖಂಡಿಸಿ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸೋಮವಾರ ಬೆಳಗ್ಗೆಯಿಂದಲೇ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರ ಪರಿಣಾಮ ಹಲವು ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿಯೇ ಸಂಜೆವರೆಗೂ ಕಾಲ ಕಳೆದರು.

110ಕ್ಕೂ ಅಧಿಕ ಸಂಘಟನೆಗಳ ಕಾರ್ಯಕರ್ತರು ತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದು, ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ನಗರದ ಕೇಂದ್ರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಆದರೆ, ಕೆಲ ಭಾಗಗಳಲ್ಲಿ ವಾಹನ ಸಂಚಾರ ಎಂದಿನಂತೆ ನಡೆದಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳು ತೆರೆದಿದ್ದರೂ, ಗ್ರಾಹಕರು ಬರಲಿಲ್ಲ.

ಪ್ರತಿಭಟನೆ, ಮೆರವಣಿಗೆ ನಡೆದ ಮಾರ್ಗಗಳಲ್ಲಿ ಬಹುತೇಕ ವ್ಯಾಪಾರ ಕೇಂದ್ರಗಳು ಮುಚ್ಚಿದ್ದವು. ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ, ಅಂಗಡಿಗಳು, ಸರಕಾರಿ ಕಚೇರಿಗಳು ಹಾಗೂ ಬ್ಯಾಂಕ್ ಕೇಂದ್ರಗಳು ಎಂದಿನಂತೆ ತೆರೆದಿದ್ದವು.

ಬೆಂಗಳೂರಿನಲ್ಲಿ ಸಾಗರೋಪಾದಿ: ಪ್ರತಿಭಟನೆಯ ಕೇಂದ್ರ ಬಿಂದು ರಾಜಧಾನಿ ಬೆಂಗಳೂರಿನ ಪುರಭವನ ಮುಂಭಾಗ ಸಾಗರೋಪಾದಿಯಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಮೈಸೂರು ಬ್ಯಾಂಕಿನ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸೋಮವಾರ ಮುಂಜಾನೆಯೇ ನಗರದ ವಿವಿಧ ಭಾಗಗಳಿಂದ ಬೈಕ್, ವಾಹನಗಳ ಮೂಲಕ ಪುರಭವನ ಮುಂಭಾಗ ಜಮಾಯಿಸಿದ ರೈತ, ದಲಿತ, ಕಾರ್ಮಿಕ ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರತಿಕೃತಿ ದಹಿಸಿ, ರಸ್ತೆಯಲ್ಲಿಯೇ ಉರುಳುಸೇವೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.

ಸಂಚಾರ ಬಂದ್: ಮುಂಜಾನೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಧಾವಿಸಿದ ಕನ್ನಡ ಪರ ಹೋರಾಟಗಾರರು ಬಸ್ ಸಂಚಾರಕ್ಕೆ ತಡೆ ಹಾಕಿದರು. ತದನಂತರ, ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್‍ಗಳ ಸಂಚಾರವೂ ನಿಂತಿದ್ದರಿಂದ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿಯೇ ಕಾಲ ಕಳೆದರು. ಖಾಸಗಿ ವಾಹನಗಳಾದ ಟ್ಯಾಕ್ಸಿ, ಆಟೋಗಳ ಸಂಚಾರವೂ ತಗ್ಗಿತ್ತು.

ಇನ್ನು, ಪ್ರತಿಭಟನೆಯ ಕಾವು ಗೊತ್ತಾಗದೆ, ಪುರಭವನ, ಮೈಸೂರು ಬ್ಯಾಂಕ್ ವೃತ್ತದ ರಸ್ತೆಗಳ ಕಡೆ ಬಂದ ವಾಹನ ಸವಾರರು, ರಸ್ತೆಯಲ್ಲಿ ಸಾಲು ಸಾಲಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಇತ್ತ ಮೆಜೆಸ್ಟಿಕ್‍ನಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದು, ಮಂಜುನಾಥ್ ದೇವು, ಗಿರೀಶ್ ಗೌಡ ಮುಂತಾದವರು ಪ್ರತಿಭಟನೆ ನಡೆಸಿ ಕೃಷಿಕರಿಗೆ ಮಾರಕವಾದ ಕಾಯ್ದೆಗಳನ್ನು ಕೂಡಲೇ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಮತ್ತೊಂದೆಡೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಾರಾಯಣಗೌಡ ನೇತೃತ್ವದಲ್ಲಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಯತ್ನ ನಡೆಸಿದರು. ಪೊಲೀಸರು ಕಾರ್ಯಕರ್ತರನ್ನು ರೈಲ್ವೆ ನಿಲ್ದಾಣದ ಒಳಗೆ ಬಿಡದೆ ತಡೆದು ಹಲವರನ್ನು ತಮ್ಮ ವಶಕ್ಕೆ ಪಡೆದರು.

ಜಾಥಾದಲ್ಲಿ ರೈತಪರ ಹೋರಾಟಗಾರರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಸಿಐಟಿಯುನ ವರಲಕ್ಷ್ಮೀ, ನಟ, ಚಿಂತಕ ಚೇತನ್, ವಿವಿಧ ಪಕ್ಷಗಳ ನಾಯಕರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಎಲ್ಲೆಡೆ ಕೈಗೊಳ್ಳಲಾಗಿತ್ತು.

ಕತ್ತೆ ಮೇಲೆ ಕುಳಿತ ವಾಟಾಳ್

ಕರ್ನಾಟಕ ಬಂದ್ ಪ್ರತಿಭಟನೆ ಹಿನ್ನೆಲೆ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮಂಗಳ ವಾದ್ಯದೊಂದಿಗೆ ಕತ್ತೆ ಮೇಲೆ ಕುಳಿತು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಕತ್ತೆ ಮೇಲೆ ಕುಳಿತು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇನೆ. ಈ ದಿನ ಹಿಂದೆ ಬಂದಿಲ್ಲ, ಮುಂದೆ ಸಹ ಬರಲ್ಲ. ನಾವು ಸುಮಾರು 50 ವರ್ಷಗಳಿಂದ ರೈತರಿಗಾಗಿ ಹೋರಾಟ ಮಾಡುತ್ತದ್ದೇವೆ. ಅವರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಾರೆ. ನಾವು ಅವರ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವೆ ಎಂದು ತಿಳಿಸಿದರು.

ನೇಗಿಲು ಹಿಡಿದು ಪ್ರತಿಭಟನೆ

ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಿಲ್ಲಿ ಎಂಬಂತೆ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿ ನೇಗಿಲು ಹಿಡಿದು ಪ್ರತಿಭಟನೆ ನಡೆಸಿ, ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.

ಪ್ರಸ್ತುತ ಸರಕಾರವು ನಾವು ಕಾರ್ಪೋ ರೇಟ್ ಕಂಪೆನಿಗಳ ಪರ ಎಂದು ತೀರ್ಮಾನ ಕೈಗೊಂಡ ಮೇಲೆ ಜನರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಈ ಮಸೂದೆಗಳಿಂದ ಸಿರಿ ಧಾನ್ಯಗಳು ಹಾಗೂ ಕೆಲ ಬೆಳೆಗಳು ಬೆಂಬಲ ಬೆಲೆ ಕಳೆದುಕೊಳ್ಳುತ್ತಿವೆ. ಇಂತಹ ಒಂದು ಬದಲಾವಣೆಯನ್ನು ರೈತರು ಕನಸಿನಲ್ಲೂ ಕಂಡಿರಲಿಲ್ಲ. ಏನೇ ಮಾಡಿದರೂ ದೇಶದಲ್ಲಿ ರೈತರನ್ನು ಎದುರಿಸುವ ಶಕ್ತಿ ಯಾರಿಗೂ ಇಲ್ಲ.

-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ

ಏರ್ ಪೋರ್ಟ್‍ಗೆ ಮುತ್ತಿಗೆ: ವಶಕ್ಕೆ

ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ಬೆಂಬಲ ಸೂಚಿಸಿ ಕರವೇ ಕಾರ್ಯಕರ್ತರು ಸೋಮವಾರ ಬೆಳ್ಳಂಬೆಳಗ್ಗೆ ನಗರದ ಏರ್ ಪೋರ್ಟ್‍ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News