ತೆಲಂಗಾಣಕ್ಕೆ ಸೆ.28ರಿಂದ ಈಕರಸಾಸ ಬಸ್ ಸಂಚಾರ ಆರಂಭ

Update: 2020-09-28 12:49 GMT

ಬೀದರ್, ಸೆ.28: ತೆಲಂಗಾಣ ರಾಜ್ಯಕ್ಕೆ ಸೆ.28ರಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೇವೆ ಆರಂಭವಾಗಲಿದ್ದು, ಮೊದಲ ದಿನವೇ 20 ಬಸ್‍ಗಳು ಹೈದರಾಬಾದ್‍ಗೆ ಸಂಚರಿಸಲಿವೆ ಎಂದು ಬೀದರ್ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್ ತಿಳಿಸಿದ್ದಾರೆ.

ಲಾಕ್‍ಡೌನ್ ಜಾರಿಯಾಗುವ ಮೊದಲು ಹೈದರಾಬಾದ್‍ಗೆ 50ಕ್ಕೂ ಹೆಚ್ಚು ಬಸ್‍ಗಳು ಸಂಚರಿಸುತ್ತಿದ್ದವು. ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಮೊದಲ ದಿನ 20 ಬಸ್‍ಗಳು ಸಂಚರಿಸಲಿವೆ. ಹಂತ ಹಂತವಾಗಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‍ಗಳು ಸಂಚರಿಸಲಿವೆ ಎಂದು ತಿಳಿಸಿದರು.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳೂ ಹೈದರಾಬಾದ್ ಹಾಗೂ ಜಹೀರಾಬಾದ್‍ನಿಂದ ಬೀದರ್ ಗೆ ಬರಲಿವೆ. ಅಲ್ಲಿಯ ಸಾರಿಗೆ ಸಂಸ್ಥೆ ಈಗಾಗಲೇ ಪತ್ರವನ್ನು ಕಳುಹಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ. 

ಕೊರೋನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬೀದರ್‍ಗೆ ರಾತ್ರಿ ವೇಳೆ ಬರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಬೆಳಗಿನ ವೇಳೆಯಲ್ಲಿ ಬಸ್‍ಗಳು ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News