ಕಾಂಗ್ರೆಸ್‍ನ ದ್ವಂದ್ವ ನೀತಿಗೆ ಜನರೇ ಪಾಠ ಕಲಿಸುತ್ತಾರೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

Update: 2020-09-28 12:51 GMT

ಬೆಂಗಳೂರು, ಸೆ. 28: `ಕಾಂಗ್ರೆಸ್‍ಗೆ ಟೀಕೆ ಮಾಡಲು ವಿಷಯವೇ ಇಲ್ಲ. ಬಿ.ಡಿ.ಜತ್ತಿಯವರ ಕಾಲದಿಂದ ಕಾಂಗ್ರೆಸ್ಸಿನ ಅನೇಕ ನಾಯಕರು ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಾಗಿ ಹೋರಾಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯೂ ಇದನ್ನೇ ಹೇಳಿದೆ. ಈಗ ಬಿಜೆಪಿಯವರು ಅನ್ಯಾಯ ಮಾಡಿದ್ದಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್‍ನ ದ್ವಂದ್ವ ನೀತಿಗೆ ಜನರೇ ಪಾಠ ಕಲಿಸುತ್ತಾರೆ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. `ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಯಾರಿಗೂ ತೊಂದರೆಯಾಗದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ನೀರಾವರಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸುವಂತಿಲ್ಲ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ಭೂಮಿ ಕೊಳ್ಳುವಂತಿಲ್ಲ, ಸಣ್ಣ, ಅತಿಸಣ್ಣ ರೈತರಿಗೆ ಯಾವುದೇ ರೀತಿಯ ತೊಂದರೆಯಿಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದಾರೆಂದು ತಿಳಿಸಿದ್ದಾರೆ.

`ಈ ತಿದ್ದುಪಡಿಯಿಂದ ಎಪಿಎಂಸಿ ಆವರ್ತನಿಧಿಗೆ ಆದಾಯ ಕಡಿಮೆಯಾಗುತ್ತದೆ ಎಂಬ ಆತಂಕ ಇದೆ. ಎಪಿಎಂಸಿ ಸಿಬ್ಬಂದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಅವರ ಹಿತ ಕಾಪಾಡಲು ಸರಕಾರ ಬದ್ಧವಾಗಿದೆ. ರೈತನಿಗೆ ಸ್ವಾತಂತ್ರ್ಯ ನೀಡುವುದು ಈ ಕಾಯ್ದೆ ಉದ್ದೇಶ. ರೈತರ ಕೈಕಟ್ಟಿ ಹಾಕಿದ್ದ ವ್ಯವಸ್ಥೆಯಿಂದ ಅವರನ್ನು ಮುಕ್ತಗೊಳಿಸುವುದು' ಎಂದು ಸಿಎಂ ಬಿಎಸ್‍ವೈ ತಿಳಿಸಿದ್ದಾರೆಂದು ವಿಜಯೇಂದ್ರ ವಿವರಿಸಿದ್ದಾರೆ.

`ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ. ಈ ವರ್ಷ ಉತ್ತಮ ಬೆಳೆ ನಿರೀಕ್ಷೆಯಿದ್ದು, ಸ್ವತಃ ರೈತರಿಗೆ ಇದು ತಿಳಿಯಲಿದೆ. ಇಡೀ ರಾಜ್ಯ ಪ್ರವಾಸ ಮಾಡಿ, ರೈತರ ಜೊತೆ ಚರ್ಚಿಸಿ, ನಾನೇ ಖುದ್ದಾಗಿ ನಮ್ಮ ರೈತರಿಗೆ ಇದರ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರೈತರಿಗೆ ಅಭಯ ನೀಡಿದ್ದಾರೆಂದು ವಿಜಯೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News