ಚಿಕ್ಕಮಗಳೂರು: ರೈತರ ಬಂದ್ ಕರೆಗೆ ಜಿಲ್ಲಾದ್ಯಂತ ಭಾರೀ ಜನ ಬೆಂಬಲ

Update: 2020-09-28 13:16 GMT

ಚಿಕ್ಕಮಗಳೂರು, ಸೆ.28: ಕೃಷಿ, ಕಾರ್ಮಿಕ ಹಾಗೂ ಭೂಸುಧಾರಣೆ ಕಾಯ್ದೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಿದ್ದುಪಡಿ ಮಾಡಿರುವ ನಿಲುವು ಖಂಡಿಸಿ ರೈತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್‍ಗೆ ಜಿಲ್ಲಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6ರಿಂದ ಸಂಜೆ ರವರೆಗೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಜಿಲ್ಲಾದ್ಯಂತ ಬಂದ್‍ಗೆ ಉತ್ತಮ ಸ್ಪಂದನ ನೀಡಿದರು.

ಬಂದ್ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ರಸ್ತೆಗಿಳಿದಿದ್ದ ಕನ್ನಡ, ರೈತ ಹಾಗೂ ವಿವಿಧ ಪಗ್ರತಿಪರ ಸಂಘಟನೆಗಳು ನಗರದಲ್ಲಿ ಮುಂಜಾನೆ ತೆರೆದುಕೊಂಡು ವ್ಯಾಪಾರ ವಹಿವಾಟುಗಳಲ್ಲಿ ನಿರತರಾಗಿದ್ದ ಕೆಲ ಅಂಗಡಿ ಮುಂಗಟ್ಟುಗಳ ಮಾಲಕರ ಮನವೊಲಿಸಿ ಬಾಗಿಲು ಹಾಕಿಸುತ್ತಿದ್ದ ದೃಶ್ಯಗಳು ಕಂಡುಬಂತು. ಉಳಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದ ಸಂಜೆವರೆಗೆ ಬಾಗಿಲು ಮುಚ್ಚಿದ್ದು, ಸಂಜೆ 6ರ ಬಳಿಕ ಎಂದಿನಂತೆ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದವು.

ನಗರ ಸೇರಿದಂತೆ ಜಿಲ್ಲಾದ್ಯಂತ ಅಗತ್ಯ ವಸ್ತುಗಳ ಅಂಗಡಿ, ಮುಂಗಟ್ಟುಗಳು ಸೇರಿದಂತೆ ಮೆಡಿಕಲ್ ಶಾಪ್‍ಗಳು, ಆಸ್ಪತ್ರೆ, ಕ್ಲಿನಿಕ್‍ಗಳು, ಪೆಟ್ರೋಲ್ ಬಂಕ್‍ಗಳು, ಬ್ಯಾಂಕ್‍ಗಳು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ಬಾಗಿಲು ತೆರದು ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದ ದೃಶ್ಯಗಳು ಸೋಮವಾರ ಕಂಡುಬಂದವು. ನಗರದಲ್ಲಿ ಆಟೊ ಚಾಲಕರ ಸಂಘ ಬಂದ್ ಬೆಂಬಲ ಘೋಷಿಸಿದ್ದವಾದರೂ ಕೆಲ ಆಟೊಗಳು ಸೋಮವಾರವೂ ರಸ್ತೆಗಿಳಿದಿದ್ದವು. ಆದರೆ ಕೆಎಸ್ಸಾರ್ಟಿಸಿ ಬಸ್‍ಗಳ ಪೈಕಿ ಕೆಲವೇ ಕೆಲವು ಬಸ್‍ಗಳು ರಸ್ತೆಯಲ್ಲಿ ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಉಳಿದಂತೆ ಕಾರು, ಬೈಕ್‍ಗಳ ಓಡಾಟ ಎಂದಿನಂತಿತ್ತಾದರೂ ನಗರದಲ್ಲಿ ಸಾರ್ವಜನಿಕರ ಸಂಚಾರ ಕಡಿಮೆ ಇತ್ತು. ಸರಕು ಸಾಗಣೆ ವಾಹನಗಳು ಎಂದಿನಂತೆ ಓಡಾಡಿದವು. ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋ ಆವರಣ ನಿಂತಿದ್ದ ಬಸ್‍ಗಳಿಂದ ಭರ್ತಿಯಾಗಿದ್ದವು.

ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೂಡಿಗೆರೆ, ಕೊಪ್ಪ, ಕಡೂರು, ತರೀಕೆರೆ, ನರಸಿಂಹರಾಜಪುರ, ಅಜ್ಜಂಪುರ, ಶೃಂಗೇರಿ ಪಟ್ಟಣಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮುಚ್ಚಲಾಗಿತ್ತು. ಅಗತ್ಯ ಸೇವೆಗಳು ಮಾತ್ರ ಎಂದಿನಂತೆ ಮುಂದುವರಿದಿತ್ತು. ಸರಕಾರ ಹಾಗೂ ಖಾಸಗಿ ಬಸ್‍ಗಳ ಓಡಾಟ ಬಂದ್ ಆಗಿದ್ದರಿಂದ ಸರಕಾರಿ ಕಚೇರಿ, ಖಾಸಗಿ ಕೆಲಸಗಳಿಗೆ ಬರುವವರು ತೊಂದರೆ ಅನುಭವಿಸಿದರು. ತಾಲೂಕು ಕೇಂದ್ರಗಳಲ್ಲಿ ರೈತ, ಕನ್ನಡ, ದಲಿತ ಸಂಘಟನೆಗಳೂ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ, ಎಸ್‍ಡಿಪಿಐ ಪಕ್ಷಗಳ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂದ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಸೋಮವಾರ ಬೆಳಗ್ಗೆ ರೈತರ ಹೋರಾಟಕ್ಕೆ ದಲಿತ, ಪ್ರಗತಿಪರ, ಕನ್ನಡಪರ, ಮುಸ್ಲಿಂ ಸಂಘಟನೆಗಳೂ ಸೇರಿದಂತೆ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ, ಎಸ್‍ಡಿಪಿಐ ಪಕ್ಷಗಳು ಬೆಂಬಲ ಸೂಚಿಸಿ ಸಮಾವೇಶಗೊಂಡಿದ್ದರು. ಈ ವೇಳೆ ವಿವಿಧ ಸಂಘಟನೆ, ಪಕ್ಷಗಳ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಾಭಿಪ್ರಾಯಕ್ಕೆ ಮನ್ನಣೆ ನೀಡದೇ ಕೃಷಿ, ಕಾರ್ಮಿಕ, ಎಪಿಎಂಸಿ ಹಾಗೂ ಭೂಸುಧರಣೆ ಕಾಯ್ದೆಗಳಿಗೆ ಅಕ್ರಮವಾಗಿ ತಿದ್ದುಪಡಿ ಮಾಡಲು ಮುಂದಾಗಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಬಳಿಕ ಹನುಮಂತಪ್ಪ ವೃತ್ತದಲ್ಲಿ ಬೃಹತ್ ಮಾನವ ಸರಪಣಿ ನಿರ್ಮಿಸಿದ ಧರಣಿ ನಿರತರು ವಾಹನ ಸಂಚಾರಕ್ಕೆ ಕೆಲ ಹೊತ್ತು ಅಡ್ಡಿ ಮಾಡಿದರು, ಈ ವೇಳೆ ಸರಕಾರಗಳು ಜನಪರ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು. ನಂತರ ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶ ನಡೆಸಿದರು. 

ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಸರ್ಪಗಾವಲನ್ನು ನಿಯೋಜಿಸಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಹಿತಕರ ಘಟನೆಗಳು ನಡೆದ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಒಟ್ಟಾರೆ ಸೋಮವಾರ ರೈತರು ಕರೆ ನೀಡಿದ್ದ ಬಂದ್‍ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News