'ಕರ್ನಾಟಕ ಬಂದ್'ಗೆ ಕೊಳ್ಳೇಗಾಲ ಸ್ತಬ್ಧ: ಪ್ರತಿಭಟನೆಗೆ ಶಾಸಕ ಎನ್.ಮಹೇಶ್ ಸಾಥ್

Update: 2020-09-28 13:26 GMT

ಕೊಳ್ಳೇಗಾಲ, ಸೆ.28: ಭೂ ಸುದಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ 8 ವಿವಿಧ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಗಳು ಕರೆಕೊಟ್ಟಿದ್ದ ಕರ್ನಾಟಕ‌ ಬಂದ್ ಗೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದ್ದು, ಪಟ್ಟಣದಲ್ಲಿ ಯಶಸ್ವಿ ಪ್ರತಿಭಟನೆ ನಡೆಸಿತು.

ಬೆಳ್ಳಂಬೆಳ್ಳಗೆ ರಸ್ತೆಗಳಿದ ರೈತರು ಪ್ರತಿಭಟನೆಯ ಬಿಸಿಯನ್ನು ಹೆಚ್ಚಿಸಿದರು. ಡಾ.ಬಿ.ಆರ್ .ಅಂಬೇಡ್ಕರ್, ಡಾ.ರಾಜ್ ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಚೌಡೇಶ್ವರಿ ರಸ್ತೆ, ಹೆದ್ದಾರಿಯಲ್ಲಿ ತೆರೆಯಬೇಕಾದ ಅಂಗಡಿಗಳು, ಮಳಿಗೆಗಳು ಸಂಪೂರ್ಣ ಮುಚ್ಚಿದ್ದವು. ಸ್ವಯಂ ಪ್ರೇರಿತವಾಗಿ ವರ್ತಕರು ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರು.

ಆಟೋ‌ ಚಾಲಕ, ಲಾರಿ, ಟ್ಯಾಕ್ಸಿ ಮಾಲಕರ ಸಂಘಟನೆಗಳು ಬಂದ್ ಗೆ ಸಂಪೂರ್ಣ ಸಹಕಾರ‌ ನೀಡಿದ್ದವು. ರಸ್ತೆಗಿಳಿದ ಕೆಲವು ವಾಹನಗಳಿಗೆ ರೈತರು ಪ್ರತಿಭಟನೆಯ ಬಿಸಿ ಮುಟ್ಟಿಸಿ ವಾಪಸ್ ತೆರಳುವಂತೆ ಮಾಡಿದರು. ಇನ್ನೂ ಮಧ್ಯಾಹ್ನದ ಪ್ರತಿಭಟನೆ ಮೆರವಣಿಗೆ ಮುಕ್ತಾಯದವರೆಗೂ ವಾಹನಗಳು ರಸ್ತೆಗಿಳಿಯದೆ ಇದ್ದದ್ದು ಕಂಡು ಬಂತು.

ಎಂದಿನಂತೆ ಹಾಲು, ತರಕಾರಿ, ಔಷಧ ಅಂಗಡಿಗಳು ತೆರೆದಿದ್ದವು. ಸರ್ಕಾರಿ, ಖಾಸಗಿ ಬಸ್ ಗಳು ಕೆಲವು ರಸ್ತೆಗಿಳಿದರೂ ಜನರಿಲ್ಲದೆ ತೆರಳಬೇಕಾಯಿತು. ಆರ್.ಎಂ.ಸಿ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿ ರೈತರ ಚಟುವಟಿಕೆ ಸ್ಥಗಿತವಾಗಿತ್ತು.

ನಂತರ ಪಟ್ಟಣದ ಆರ್.ಎಂ.ಸಿ‌ ರಸ್ತೆಯಿಂದ ಪ್ರಾರಂಭ ಪ್ರತಿಭಟನಾ ಮೆರವಣಿಗೆಯು ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಶಾಸಕ ಎನ್. ಮಹೇಶ್ ಕೂಡ ಪ್ರತಿಭಟನೆಗೆ ಬೆಂಬಲ ನೀಡಿ ಪ್ರತಿಭಟನಾಕಾರರೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಮೊಳಗಿತು.

ರೈತ ಮುಖಂಡ ಗೌಡೇ ಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.

ಎದೆಗೆ ಚಪ್ಪಡಿ ಕಲ್ಲು ಹಾಕಿಕೊಂಡು ಪ್ರತಿಭಟನೆ: ‌ಪ್ರತಿಭಟನೆ ವೇಳೆ ಹೆದ್ದಾರಿಯಲ್ಲಿ ಕೆಲವು ಕಾಲ ಮಾನವ ಸರಪಳಿ ನಿರ್ಮಿಸಿದ ರೈತರು, ಭೂ‌ ಸುಧಾರಣಾ ‌ತಿದ್ದುಪಡಿ ಕಾಯ್ದೆ‌ಗೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ ವೇಷಧರಿಯಾಗಿ ರೈತನ ಎದೆಗೆ ಚಪ್ಪಡಿ ಕಲ್ಲು ಹಾಕುವಂತೆ ಬಿಂಬಿಸಿ, ಬಾಯಿ ಬಡಿದು ರೈತರು ಪ್ರತಿಭಟಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. 

ರೈತರ ಪರ ನಿಲ್ಲುತ್ತೇನೆ: ಶಾಸಕ ಎನ್.ಮಹೇಶ್

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ‌ ಎನ್.ಮಹೇಶ್, ರೈತ ಪರವಾಗಿ‌ ನನ್ನ ಹೋರಾಟ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಾನು ಸದನದಲ್ಲಿ ಪ್ರಸ್ತಾಪಿಸಲು ಮುಂದಾದೆ. ಆದರೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಸಮಗ್ರವಾಗಿ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಸಿಕ್ಕ ಸಮಯದಲ್ಲಿ ತಿದ್ದುಪಡಿ ಕಾಯ್ದೆಗಳಿಂದ ರೈತರಿಗಿರುವ ಅನಾನುಕೂಲದ ಬಗ್ಗೆ ಮಾತನಾಡಿದ್ದೇನೆ. ಜಾಗತೀಕರಣ, ಖಾಸಗೀಕರಣ, ಉದಾರಿಕರಣವೇ ಈ ರೈತ ವಿರೋಧಿ ಕಾಯ್ದೆಗಳಾಗಿವೆ. ಮುಂದಿನ ಅದಿವೇಶನದಲ್ಲಿ ರೈತರ ಪರ ಹೋರಾಟ ಮಾಡುತ್ತೇನೆ ಎಂದರು.

ಮಾಜಿ ಶಾಸಕ ತಿರುಗೇಟು: ಶಾಸಕ ಎನ್.ಮಹೇಶ್ ಮಾತಿಗೆ ತಿರುಗೇಟು ನೀಡಿದ ಮಾಜಿ ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು, ಎನ್.ಮಹೇಶ್ ಬಹುಶಃ ಬಿಎಸ್ಪಿ ಅಥವಾ ಯಾವುದೇ‌ ಪಕ್ಷದಲ್ಲಿದ್ದರೂ ವಿರೋಧ ಪಕ್ಷದ ನಾಯಕರಾಗುತ್ತಿದ್ದರು. ಆದರೆ, ಇದೀಗ ಸ್ವತಂತ್ರ ‌ಶಾಸಕರಾಗಿರುವ ಕಾರಣ, ಆಡಳಿತ ಪಕ್ಷವೂ ಹೆಚ್ಚಿಗೆ ಮಾತನಾಡುವ ಅವಕಾಶ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದರು. ಶಾಸಕ‌‌ ಎನ್.ಮಹೇಶ್ 'ನಿಮ್ಮ‌ ಮಾತು ಸರಿಯಿಲ್ಲ. ನೀವು ಹೇಳುವುದು ಕಾರಣವಲ್ಲ' ಎಂದು ಹೇಳಿ ಪ್ರತಿಭಟನೆಯಿಂದ‌ ಹೊರನಡೆದರು.

ರೈತ ಮುಖಂಡರಾದ ಅಣಗಳ್ಳಿ ಬಸವರಾಜು, ಶೈಲೇಂದ್ರ, ಅಂಜುಮನ್ ಇಸ್ಲಾಮಿಯ ಅಧ್ಯಕ್ಷ ಸಮೀಉಲ್ಲಾ, ಬಿಎಸ್ಪಿ ರಾಜಶೇಖರ ಮೂರ್ತಿ, ಜಯ ಕರ್ನಾಟಕ ಪ್ರಭುಸ್ವಾಮಿ, ಮೋಳೆ ರಾಮಕೃಷ್ಣ, ಮಹದೇವ, ಮಹಮದ್ ಮತೀನ್, ಆಟೋ ಚಾಲಕ ಸಂಘದ ಅಧ್ಯಕ್ಷ‌ ಲೋಕೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News