ಬೆಂಗಳೂರನ್ನು ಉಗ್ರರ ತಾಣ ಎಂದು ಕನ್ನಡಿಗರಿಗೆ ಅವಮಾನ ಮಾಡಿದ ತೇಜಸ್ವಿ ಸೂರ್ಯ: ಕಾಂಗ್ರೆಸ್ ಆಕ್ರೋಶ

Update: 2020-09-28 14:35 GMT

ಬೆಂಗಳೂರು, ಸೆ. 28: `ಬೆಂಗಳೂರು ಉಗ್ರರ ತಾಣವಾಗಿದೆ' ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ತೇಜಸ್ವಿ ಸೂರ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

`ಉಗ್ರರ ತಾಣ ಎಂದು ಕರೆದಿರುವುದು ಕನ್ನಡಿಗರಿಗೆ ಮಾಡಿದ ಅವಮಾನ' ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದರೆ, `ಭಯೋತ್ಪಾದನಾ ಕೇಂದ್ರ ಎಂಬ ಅರ್ಹತೆ ಪಡೆಯಲು ಇರುವ ಮಾನದಂಡವೇನು' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಶಾಸಕಿ ಸೌಮ್ಯಾ ರೆಡ್ಡಿ, `ನಿಮ್ಮ ಹಿತಾಸಕ್ತಿಗಾಗಿ ಶಾಂತಿಯುತ ನಗರಕ್ಕೆ ಕಳಂಕ ತರುವ ಕೆಲಸ ಮಾಡಬೇಡಿ' ಎಂದು ಸಲಹೆ ಮಾಡಿದ್ದಾರೆ.

ಕ್ಷಮೆಯಾಚಿಸಬೇಕು: `ಬೆಂಗಳೂರನ್ನು ಜಗತ್ತು ನೋಡುತ್ತಿದೆ. ಪ್ರಪಂಚದ ಹಲವು ದೇಶಗಳಿಗೆ ಇಂಜಿನಿಯರ್ ಕೊಟ್ಟಿರುವ ನಗರ ಇದು. ಐಟಿ ಹಬ್ ಆಗಿ ಜನಪರಿಚಿತವಾಗಿರುವ ನಗರದ ಕುರಿತು ಈ ರೀತಿಯ ಹೇಳಿಕೆ ಸರಿಯಲ್ಲ. ಕರ್ನಾಟಕವನ್ನು ಭಯೋತ್ಪಾದಕರ ತಾಣ ಎನ್ನುವ ಮೂಲಕ ಅವರು ಕನ್ನಡಿಗರನ್ನು ಅವಮಾನಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ಕುರಿತು ಅವರು ಕನ್ನಡಿಗರ ಕ್ಷಮೆಯಾಚಿಸಬೇಕು' ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರು ನಗರದ ಬಗ್ಗೆ ಈ ರೀತಿ ಅವಹೇಳನಕಾರಿ ಹೇಳಿಕೆ ನೀಡುವುದು ಖಂಡನೀಯ. ನಗರವನ್ನು ಈ ರೀತಿ ಉಗ್ರರ ತಾಣ ಎನ್ನುವ ಮೂಲಕ ಸಂಸದರು ಜಿಡಿಪಿಯ ವೃದ್ಧಿಗೆ ಕೊಡಲಿ ಪೆಟ್ಟು ನೀಡಲಿದ್ದಾರೆ. ಸಂಸದರು ಈ ರೀತಿ ಹೇಳಿಕೆ ನೀಡಿದರೆ, ಯಾರು ಬಂದು ಬಂಡವಾಳ ಹೂಡುತ್ತಾರೆ? ಇದಕ್ಕೆ ಪ್ರಧಾನಿ ಮತ್ತು ಹಣಕಾಸು ಸಚಿವರ ಉತ್ತರವೇನು ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಪ್ರಾಮುಖ್ಯತೆ ಬಗ್ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂದೇ ಮಾತನಾಡಿದ್ದರು. ಜಗತ್ತಿನ ನಾಯಕರು ಮೊದಲು ಬೆಂಗಳೂರಿಗೆ ಭೇಟಿ ನೀಡಿದ ಬಳಿಕ ದಿಲ್ಲಿಗೆ ಹೋಗುತ್ತಾರೆ. ಆದರೆ, ಬೆಂಗಳೂರಿನ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಈ ರೀತಿ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಅಪಮಾನಿಸಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಕನ್ನಡಿಗರ ಬಗ್ಗೆ ಈ ರೀತಿ ಮಾತನಾಡುವ ಅವರು ತೇಜಸ್ವಿ ಸೂರ್ಯ ಅಲ್ಲ, ಅಮವಾಸ್ಯೆ ಸೂರ್ಯ ಎಂದು ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಅರ್ಹತೆ ಏನು: `ಭಯೋತ್ಪಾದನಾ ಕೇಂದ್ರ ಎಂಬ ಅರ್ಹತೆ ಪಡೆಯಲು ಇರುವ ಮಾನದಂಡಗಳು ಏನು' ಎಂದು ಪ್ರಶ್ನಿಸಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ನಗರದಲ್ಲಿ ಎಷ್ಟು ಭಯೋತ್ಪಾದನಾ ಚಟುವಟಿಕೆಗಳು ನಡೆದಿವೆ? ಭಯೋತ್ಪಾದನಾ ಕೇಂದ್ರವೆಂಬ ಅರ್ಹತೆ ಪಡೆಯಲು ಇರುವ ಮಾನದಂಡಗಳು ಏನು ಎಂಬುದನ್ನು ಬಿಜೆಪಿಯವರಿಂದ ಕೇಳಲು ನಾನು ಇಷ್ಟಪಡುತ್ತೇನೆ?' ಟ್ವಿಟ್ಟರ್ ಮೂಲಕ ಕೇಳಿದ್ದಾರೆ.

'ಇನ್ನು ಮುಂದೆ ಹೂಡಿಕೆದಾರರನ್ನು `ಭಯೋತ್ಪಾದನಾ ನಗರ'ಕ್ಕೆ ಕರೆತರಲು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಕಷ್ಟು ಶ್ರಮಪಡಬೇಕಿದೆ' ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

'ತಮ್ಮ ಹಿತಾಸಕ್ತಿಗಾಗಿ ಬೆಂಗಳೂರು ನಗರದ ಕುರಿತು ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಸುಂದರ, ಕಾಸ್ಮೋಪಾಲಿಟನ್, ವೈವಿಧ್ಯತೆಯ, ಐಟಿ-ಬಿಟಿ ಹಬ್ ಆಗಿರುವ ನಮ್ಮ ನಗರ ಸುರಕ್ಷತೆ, ಶಾಂತಿಯುತ ನಗರ. ಈ ರೀತಿ ಈ ನಗರದ ಬಗ್ಗೆ ಕಳಂಕ ತರುವ ಪ್ರಯತ್ನ ನಡೆಸಬೇಡಿ' ಎಂದು ಶಾಸಕಿ ಸೌಮ್ಯಾ ರೆಡ್ಡಿ, ಟ್ವಿಟ್ಟರ್ ಮೂಲಕ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದನೆಂಬ ಪರಿಜ್ಞಾನ ಇಲ್ಲದೆ ಬೆಂಗಳೂರು ನಗರದ ಕುರಿತು ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದು ಖ್ಯಾತಿ ಪಡೆದಿರುವ ನಗರವನ್ನು ಭಯೋತ್ಪಾದಕರ ತಾಣ ಎಂದಿರುವುದು ನಾಚಿಕೆಗೇಡು. ರಾಜ್ಯಕ್ಕೆ ಅಪಮಾನ ಮಾಡಿರುವ ತೇಜಸ್ವಿ ಸೂರ್ಯ ಕ್ಷಮೆಯಾಚಿಸಬೇಕು'

-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News