ಬೆಂಗಳೂರು: ಖಾಸಗಿ ಟಿವಿ ಮುಖ್ಯಸ್ಥರ ಮನೆಗೆ ಸಿಸಿಬಿ ಪೊಲೀಸರ ದಾಳಿ, ಶೋಧ

Update: 2020-09-28 16:17 GMT

ಬೆಂಗಳೂರು, ಸೆ.28: ವಂಚನೆ, ಜೀವ ಬೆದರಿಕೆ ಆರೋಪದಡಿ 'ಪವರ್ ಟಿ.ವಿ' ಸುದ್ದಿ ವಾಹಿನಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಇಲ್ಲಿನ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ಬೆನ್ನಲ್ಲೇ ಸಿಸಿಬಿ ಪೊಲೀಸರು ರಾಕೇಶ್ ಅವರ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದರು.

ಸೋಮವಾರ ನಗರದ ರಾಕೇಶ್ ಶೆಟ್ಟಿ ಅವರ ನಿವಾಸದ ಮೇಲೆ 8ಕ್ಕೂ ಅಧಿಕ ತನಿಖಾಧಿಕಾರಿಗಳ ತಂಡ ದಾಳಿ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದರು.

ಇತ್ತೀಚಿಗೆ ‘ರಾಮಲಿಂಗಂ ಕನ್‍ಸ್ಟ್ರಕ್ಷನ್ ಕಂಪೆನಿಯ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ (36) ಎಂಬವರು ನೀಡಿದ್ದ ದೂರಿನನ್ವಯ ರಾಕೇಶ್ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪಿತೂರಿ (ಐಪಿಸಿ 120ಬಿ), ಸುಲಿಗೆ (ಐಪಿಸಿ 384), ವಂಚನೆ (ಐಪಿಸಿ 419), ಸಹಿ ನಕಲು ಮಾಡಿದ (ಐಪಿಸಿ 465), ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಮೊಕದ್ದಮೆ ದಾಖಲಿಸಲಾಗಿತ್ತು.

ತದನಂತರ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕರಣ ತನಿಖೆಯನ್ನು ಸಿಸಿಬಿಗೆ ವಹಿಸಿ ಆದೇಶಿಸಿದ್ದರು. ಇದರ ಬೆನ್ನಲ್ಲೇ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

''ರಾಜಕೀಯ ಪ್ರೇರಿತ ದಾಳಿ'': ಬಿಜೆಪಿ ಮುಖಂಡರೊಬ್ಬರ ಭ್ರಷ್ಟಾಚಾರ ಆರೋಪಯೊಂದರ ಬಗ್ಗೆ ಹಲವು ದಿನಗಳಿಂದ ಸತತ ದಾಖಲೆ ಸಹಿತ ವರದಿ ಮಾಡಿ ರಾಜ್ಯದ ಗಮನ ಸೆಳೆಯಲಾಗಿತ್ತು. ಇದೇ ಕಾರಣಕ್ಕಾಗಿಯೇ ಗುತ್ತಿಗೆದಾರ ಚಂದ್ರಕಾಂತ್ ಎಂಬವರು ನೀಡಿದ ದೂರನ್ನು ಪೊಲೀಸರು ನೆಪವಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎಂದು ಪವರ್ ಟಿವಿ ಸಂಸ್ಥೆಯು ಆರೋಪಿಸಿದೆ.

ಖಂಡನೆ: ಯಾವುದೇ ವಾರೆಂಟ್ ಇಲ್ಲದೇ ಈ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ದಸಂಸ ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳು ಖಂಡಿಸಿದ್ದು, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News