ಪಿಯು-ಎಸೆಸೆಲ್ಸಿ ಮಂಡಳಿ ವಿಲೀನಕ್ಕೆ ವಿರೋಧ: ಜಂಟಿ ಹೋರಾಟಕ್ಕೆ ಸಮಿತಿ

Update: 2020-09-28 16:21 GMT

ಬೆಂಗಳೂರು, ಸೆ.29: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯನ್ನು ಪದವಿಪೂರ್ವ ಪರೀಕ್ಷಾ ಮಂಡಳಿಯ ಜತೆಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಹೋರಾಟ ರೂಪಿಸಲು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಮತ್ತು ಬೋಧಕೇತರ ಸಿಬ್ಬಂದಿಯನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿಯೊಂದು ರೂಪಗೊಂಡಿದೆ.

ಎರಡೂ ಮಂಡಳಿಗಳನ್ನು ವಿಲೀನ ಮಾಡುವ ಪ್ರಕ್ರಿಯೆ ಹಿಂದಿನ ಸರಕಾರದ ಅವಧಿಯಲ್ಲಿಯೇ ಇತ್ತು. ಆದರೆ, ಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ಕೆಲವು ತಿಂಗಳ ಹಿಂದೆ ಈ ಕುರಿತು ಮುಖ್ಯಮಂತ್ರಿಯ ಜತೆಗೆ ವಿಷಯ ಪ್ರಸ್ತಾಪಿಸಿದ್ದಾದರೂ, ಯಾವುದೇ ನಿರ್ಧಾರವನ್ನು ಸರಕಾರ ತೆಗೆದುಕೊಂಡಿಲ್ಲ.

ಪಿಯು ಮಂಡಳಿ ವಿಲೀನಕ್ಕೆ ಸಂಬಂಧಿಸಿದ ಪಿಯು ಉಪನ್ಯಾಸಕರು, ಬೋಧಕೇತರರು ಹಾಗೂ ಪ್ರಾಂಶುಪಾಲರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡಳಿಯನ್ನು ಪ್ರತ್ಯೇಕವಾಗಿಯೇ ಉಳಿಸಿಕೊಳ್ಳುವ ಕುರಿತು ಇತ್ತೀಚಿಗಷ್ಟೇ ಹೋರಾಟ ಸಮಿತಿಯೊಂದು ರೂಪಗೊಂಡಿದೆ.

ಉಪನ್ಯಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ರೀತಿಯ ವಿಲೀನ ಸರಿಯಲ್ಲ. ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಿದ್ದೇವೆ. ಪ್ರಸ್ತಾವವನ್ನು ಇಲಾಖೆ ಕೈಬಿಡದಿದ್ದರೆ ಹೋರಾಟ ನಡೆಸಲಿದ್ದೇವೆ. ಪ್ರಾಂಶುಪಾಲರ ಸಂಘದ ಗೌರವಾಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ, ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ, ಬೋಧಕತೇರ ಸಂಘದ ಅಧ್ಯಕ್ಷ ನಂದೀಶ್ ಸೇರಿದಂತೆ ಸುಮಾರು 50 ಮಂದಿ ಪದಾಧಿಕಾರಿಗಳು ಚರ್ಚೆ ಮಾಡಿ, ಜಂಟಿ ಕ್ರಿಯಾ ಸಮಿತಿ ರಚಿಸಿದ್ದೇವೆ. ಈ ಸಮಿತಿಯ ಮೂಲಕವೇ ಹೋರಾಟ ಮಾಡಲಿದ್ದೇವೆ ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News