'ಮಾತು ತಪ್ಪಿದ' ಮುಖ್ಯಮಂತ್ರಿ ಯಡಿಯೂರಪ್ಪ: ಕಾಡುಗೊಲ್ಲರ ಸಂಘಟನೆಗಳ ಒಕ್ಕೂಟ ಟೀಕೆ

Update: 2020-09-28 16:34 GMT

ಬೆಂಗಳೂರು, ಸೆ. 28: `ಕಾಡುಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸುವ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಏಕಾಏಕಿ `ಗೊಲ್ಲ ಅಭಿವೃದ್ದಿ ನಿಗಮ' ಸ್ಥಾಪಿಸಲು ಆದೇಶ ಮಾಡುವ ಮೂಲಕ ತಾವು ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಕಾಡುಗೊಲ್ಲರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಡಾ.ದೊಡ್ಡಮಲ್ಲಯ್ಯ ಮತ್ತು ಕೂನಿಕೆರೆ ರಾಮಣ್ಣ ಇಂದಿಲ್ಲಿ ಆಕ್ಷೇಪಿಸಿದ್ದಾರೆ.

ಸೋಮವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಉಭಯ ನಾಯಕರು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು. ಆ ಮೂಲಕ ಬಹುದಿನಗಳಿಂದ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

'ನಾಗರಿಕ ಸಮಾಜ'ದಿಂದ ಅತ್ಯಂತ ದೂರವೇ ಉಳಿದಿರುವ ಕಾಡುಗೊಲ್ಲ ಸಮುದಾಯ ಇಂದಿಗೂ ಶೋಚನೀಯ ಸ್ಥಿತಿಯಲ್ಲಿ ಹಟ್ಟಿಗಳಲ್ಲಿ ಬದುಕು ಸಾಗಿಸುತ್ತಿದ್ದು, ಎಲ್ಲ ಅವಕಾಶಗಳಿಂದ ವಂಚಿತವಾಗಿದೆ. ಇಂತಹ ಸಮುದಾಯಕ್ಕೆ ಇದೀಗ ರಾಜ್ಯ ಸರಕಾರ `ಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸುವ ಮೂಲಕ ಮತ್ತೊಂದು ಘೋರ ಅನ್ಯಾಯ ಮಾಡಲು ಹೊರಟಿದೆ. ಇದು ಸರಿಯಲ್ಲ. ಕೂಡಲೇ ಈ ಅನ್ಯಾಯವನ್ನು ಸರಿಪಡಿಸಬೇಕು. ಜೊತೆಗೆ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News