ಮೈಸೂರಿನಲ್ಲಿ ಬಂದ್‍ಗೆ ಸಂಪೂರ್ಣ ಬೆಂಬಲ: ಪ್ರತಿಭಟನಾಕಾರರ ಬಂಧನ, ಬಿಡುಗಡೆ

Update: 2020-09-28 16:47 GMT

ಮೈಸೂರು,ಸೆ.28: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಕೃಷಿ, ಎಪಿಎಂಸಿ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ಸೋಮವಾರ ರಾಜ್ಯಾದ್ಯಂತ ಬಂದ್‍ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಬಂದ್‍ಗೆ ಸಂಪೂರ್ಣ ಬೆಂಬಲ ದೊರೆಯಿತು.

ಕೃಷಿ ಹಾಗೂ ಕಾರ್ಮಿಕ ಮಸೂದೆಗಳನ್ನು ವಿರೋಧಿಸಿ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ನಗರದ ಸಬರ್ಬ್ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಸಂಚಾರ ನಡೆಸದಂತೆ ತಡೆದರು. ಈ ವೇಳೆ ಡಿಸಿಪಿ ಪ್ರಕಾಶ್ ಗೌಡ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ರೈತ ಸಂಘಟನೆ ಕರೆ ನೀಡಿದ್ದ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಹೋಟೆಲ್ ಮಾಲಕರ ಸಂಘ, ಕ್ಯಾಬ್, ಟ್ಯಾಕ್ಸ್, ಲಾರಿ ಮಾಲಕರು ತಮ್ಮ ವಹಿವಾಟನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು. ಇನ್ನು ನಗರದ ಪ್ರಮುಖ ರಸ್ತೆಗಳಾದ ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆಯ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.

ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಬಂದ್: ನಗರದ ಬಂಡೀಪಾಳ್ಯದಲ್ಲಿರುವ ಎಪಿಎಂಸಿ ಮಾರುಕಟ್ಟೆ  ವರ್ತಕರುಗಳು ತಮ್ಮ ವ್ಯಾಪಾರ ವಹಿವಾಟನ್ನು ನಿಲ್ಲಿಸಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಮತ್ತು ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಸಿ ಎಪಿಎಂಸಿ ಅಧ್ಯಕ್ಷ ಬಸವರಾಜು ಮತ್ತು ಉಪಾಧ್ಯಕ್ಷ ಜವರಪ್ಪ ಅವರ ನೇತೃತ್ವದಲ್ಲಿ ಮಾರುಕಟ್ಟೆಗೆ ಒಳ ಪ್ರವೇಶದ ದ್ವಾರದ ಬಳಿ ಪ್ರತಿಭಟನೆ ನಡೆಸಲಾಯಿತು.

ಬಸ್ ಸಂಚಾರ ಸ್ಥಗಿತ: ರೈತರ ಪ್ರತಿಭಟನೆಯಿಂದಾಗಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್‍ಗಳ ಓಡಾಟವನ್ನು ನಿಲ್ಲಿಸಿದರು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನೂಕೂಲ ಉಂಟಾಯಿತು. ಇನ್ನು ನಗರದ ಬಸ್ ನಿಲ್ದಾಣದಲ್ಲೂ ಸಹ ಬಸ್‍ಗಳು ಸಂಜೆ ವರೆಗೂ ರಸ್ತೆಗೆ ಇಳಿಯಲಿಲ್ಲ.

ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಪೊಲೀಸ್ ವ್ಯಾನ್‍ಗಳಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್‍ಗೆ ಕರೆದೊಯ್ದು ನಂತರ ಬಿಡುಗಡೆ ಗೊಳಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಹಿರಿಯ ಸಮಾಜವಾದಿ ಪ.ಮಲ್ಲೇಶ್, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ವಕೀಲ ಪುನೀತ್, ಅಭಿರುಚಿ ಗಣೇಶ್, ದಸಂಸ ಮುಖಂಡರುಗಳಾದ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಲ್ಲಹಳ್ಳಿ ಕುಮಾರ್, ಕಾರ್ಮಿಕ ಮುಖಂಡರುಗಳಾದ ಚಂದ್ರಶೇಖರ ಮೇಟಿ, ಸಂಧ್ಯಾ, ರವಿ, ಪರಿಸರವಾದಿ ಭಾನು ಮೋಹನ್, ಅಹಿಂದ ಜವರಪ್ಪ, ಕೋಟೆ ಹುಂಡಿ ಮಹದೇವ್, ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ರೈತ ಪರ ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ.
-ಪುನೀತ್ ಎನ್., ವಕೀಲರು ಹಾಗೂ ಸ್ವರಾಜ್ ಇಂಡಿಯಾ ಮುಖಂಡ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News